ಹೈಕೋರ್ಟ್‌ ಕಟ್ಟಡ ವಿಸ್ತರಣೆ: ಸರ್ಕಾರದ ಪ್ರಸ್ತಾವ ಕುರಿತ ಕಟ್ಟಡ ಸಮಿತಿಯ ಅಭಿಪ್ರಾಯವನ್ನು ಸಿಜೆ ಮುಂದೆ ಮಂಡಿಸಲು ಸೂಚನೆ

ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆ ನಡೆಸಿದ ನಂತರ ತನ್ನ ಅಭಿಪ್ರಾಯ ಏನೆಂಬುದನ್ನು ಸಮಿತಿಯು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ.
ಹೈಕೋರ್ಟ್‌ ಕಟ್ಟಡ ವಿಸ್ತರಣೆ: ಸರ್ಕಾರದ ಪ್ರಸ್ತಾವ ಕುರಿತ ಕಟ್ಟಡ ಸಮಿತಿಯ ಅಭಿಪ್ರಾಯವನ್ನು ಸಿಜೆ ಮುಂದೆ ಮಂಡಿಸಲು ಸೂಚನೆ

ಬೆಂಗಳೂರಿನ ಕರ್ನಾಟಕ ಹೈಕೋರ್ಟ್‌ ಕಟ್ಟಡ ವಿಸ್ತರಣೆಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳ ಸಂಬಂಧ ಹೈಕೋರ್ಟ್‌ ಕಟ್ಟಡ ಸಮಿತಿ ತೆಗೆದುಕೊಂಡಿರುವ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ಬುಧವಾರ ನಿರ್ದೇಶಿಸಲಾಗಿದೆ.

ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್ ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ 30ಕ್ಕೂ ಅಧಿಕ ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶರಣ ದೇಸಾಯಿ ಅವರು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆ ನಡೆಸಿದ ನಂತರ ತನ್ನ ಅಭಿಪ್ರಾಯ ಏನೆಂಬುದನ್ನು ಸಮಿತಿಯು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

Also Read
ಹೈಕೋರ್ಟ್‌ ಕಟ್ಟಡ ವಿಸ್ತರಣೆ: ರಾಜ್ಯ ಸರ್ಕಾರದ ಪ್ರಸ್ತಾವ ಪರಿಶೀಲಿಸಲು ಹೈಕೋರ್ಟ್‌ ಆಡಳಿತಕ್ಕೆ ತಿಂಗಳ ಕಾಲಾವಕಾಶ

2023ರ ಸೆಪ್ಟೆಂಬರ್‌ 21ರಂದು ವಿಚಾರಣೆಗೆ ಬಂದಿದ್ದ ವೇಳೆ ರಾಜ್ಯ ಸರ್ಕಾರ ಪರ ವಕೀಲರು, ಕಬ್ಬನ್‌ ಪಾರ್ಕ್‌ನಲ್ಲಿರುವ ಚುನಾವಣೆ ಆಯೋಗದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿಯೇ ಹೈಕೋರ್ಟ್‌ ಆಡಳಿತ ವ್ಯವಹಾರಗಳ ನಿರ್ವಹಣೆಗಾಗಿ 10 ಮಹಡಿ ಮತ್ತು 3 ಮಹಡಿಯ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ಹೈಕೋರ್ಟ್‌ ಆವರಣದಲ್ಲಿರುವ ಕ್ಯಾಂಟೀನ್‌ ಕಟ್ಟಡದ ಮೇಲೆ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ. ಜೊತೆಗೆ, ಇತರೆ ಮೂರು ಪ್ರಸ್ತಾವನೆಗಳಿದ್ದು, ಅವುಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದೆ ಎಂದು ತಿಳಿಸಿದ್ದರು. ಅದನ್ನು ಪರಿಗಣಿಸಿದ್ದ ವಿಭಾಗೀಯ ಪೀಠವು ಸರ್ಕಾರದ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸಬೇಕು ಎಂದು ಹೈಕೋರ್ಟ್‌ ಕಟ್ಟಡ ಸಮಿತಿಗೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com