ಬುಲ್ಡೋಜರ್ ಅನ್ಯಾಯಕ್ಕೆ ಮೂಗುದಾರ: ಸುಪ್ರೀಂ ಕೋರ್ಟ್ ಮಾರ್ಗಸೂಚಿಯಲ್ಲೇನಿದೆ?

ನಿರ್ದೇಶನ ಉಲ್ಲಂಘಿಸಿದರೆ, ಅಧಿಕಾರಿಗಳು ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ ಮತ್ತು ತಮ್ಮ ಜೇಬಿನಿಂದಲೇ ಪರಿಹಾರ ಮೊತ್ತ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
bulldozer
bulldozer
Published on

ಆರೋಪಿಯ ಅಪರಾಧ ಹಿನ್ನೆಲೆಯನ್ನು ಪ್ರಸ್ತಾಪಿಸಿ ಸರ್ಕಾರಿ ಅಧಿಕಾರಿಗಳು ಆತನ ಮನೆಯನ್ನು ಕೆಡವುವಂತಿಲ್ಲ ಎಂದು ಬುಧವಾರ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ವಿವಿಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸಂವಿಧಾನದ 142ನೇ ವಿಧಿಯಡಿ ನ್ಯಾಯದಾನಕ್ಕಾಗಿ ಸುಪ್ರೀಂ ಕೋರ್ಟ್‌ನ ಅಂತರ್ಗತ ಅಧಿಕಾರ ಬಳಸುವ ಮೂಲಕ  ಮೂಲಕ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

Also Read
ಬುಲ್ಡೋಜರ್ ನ್ಯಾಯ ಅಸಾಂವಿಧಾನಿಕ ಎಂದು ಸುಪ್ರೀಂ ಮಹತ್ವದ ತೀರ್ಪು: ಅಧಿಕಾರಿಗಳಿಗೆ ದಂಡ ವಿಧಿಸುವ ಮಾರ್ಗಸೂಚಿ ಬಿಡುಗಡೆ

ಮಾರ್ಗಸೂಚಿಗಳು

1. ಕಟ್ಟಡ ನೆಲಸಮ ಆದೇಶ ನೀಡಿದಾಗ ಆ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ನೀಡಬೇಕು.

2. ಶೋಕಾಸ್ ನೋಟಿಸ್ ಇಲ್ಲದೆ ಯಾವುದೇ ತೆರವು ಕಾರ್ಯಾಚರಣೆಗೆ ಅನುಮತಿ ನೀಡುವಂತಿಲ್ಲ. ನೋಟಿಸ್ ಅನ್ನು ಕಟ್ಟಡ ಮಾಲೀಕರಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು ಮತ್ತು ಕೆಡವಲು ಉದ್ದೇಶಿಸಿರುವ ಕಟ್ಟಡದ ಹೊರಗೆ ಅಂಟಿಸಬೇಕು. ನೋಟಿಸ್‌ ನೀಡಿದ ದಿನಾಂಕದಿಂದ ಕನಿಷ್ಠ 15 ದಿನಗಳ ಬಳಿಕವಷ್ಟೇ ತೆರವು ಕಾರ್ಯಾಚರಣೆ ನಡೆಸಬೇಕು.

3.  ನೋಟಿಸ್‌ನಲ್ಲಿ ಕಟ್ಟಡ ತೆರವಿಗೆ ಕಾರಣವಾಗುವಂತಹ ಯಾವ ಯಾವ ನಿಯಮ ಉಲ್ಲಂಘನೆಯಾಗಿದೆ ಎಂಬ ವಿವರ ಇರಬೇಕು. ವೈಯಕ್ತಿಕ ವಿಚಾರಣೆ ದಿನಾಂಕ ಯಾವ ಅಧಿಕಾರಿಯ ಮುಂದೆ ಹಾಜರಾಗಬೇಕು ಎಂಬ ವಿವರ ಇರಬೇಕು. ಉತ್ತರ ನೀಡುವಾಗ ನೀಡಬೇಕಾದ ದಾಖಲೆಗಳ ಪಟ್ಟಿಯನ್ನು ಸಹ ನೋಟಿಸ್‌ ಒಳಗೊಂಡಿರಬೇಕು.

4. ನೋಟಿಸ್‌ಗಳನ್ನು ಹಿಂದಿನ ದಿನಾಂಕ ನಮೂದಿಸಿ ನೀಡಲಾಗಿದೆ ಎನ್ನುವ ಯಾವುದೇ ಆಪಾದನೆಯಿಂದ ಮುಕ್ತವಾಗಲು, ಶೋಕಾಸ್ ನೋಟಿಸ್ ನೀಡಿದ ತಕ್ಷಣ, ಅದರ ವಿವರವನ್ನು ಇಮೇಲ್ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಬೇಕು ಮತ್ತು ಇದಕ್ಕೆ ಪ್ರತಿಯಾಗಿ ಇಮೇಲ್‌ ಸ್ವೀಕೃತಿ ಬಗ್ಗೆ ಜಿಲ್ಲಾಡಳಿತದಿಂದ ಸ್ವಯಂಚಾಲಿತ ಉತ್ತರ ಕಳುಹಿಸಬೇಕು. ಈ ಕಾರಣಕ್ಕಾಗಿಯೇ ನೋಡಲ್‌ ಅಧಿಕಾರಿಯೊಬ್ಬರನ್ನು ಜಿಲ್ಲಾಧಿಕಾರಿ ನೇಮಿಸಬೇಕು ಮತ್ತು ಪ್ರತ್ಯೇಕ ಇಮೇಲ್‌ ವಿಳಾಸ ಸೃಜಿಸಬೇಕು. ಈ ಇಮೇಲ್‌ ಅನ್ನು ಇಂದಿನಿಂದ ಒಂದು ತಿಂಗಳೊಳಗೆ ಕಟ್ಟಡ ನಿಯಮಾವಳಿ ಮತ್ತು ತೆರವು ಕಾರ್ಯಾಚರಣೆ ನಡೆಸುವ ಎಲ್ಲಾ ಪುರಸಭೆ ಹಾಗೂ ಇನ್ನಿತರ ಅಧಿಕಾರಿಗಳಿಗೆ ಕಳಿಸಬೇಕು.

 5. ನಿಗದಿತ ಡಿಜಿಟಲ್ ಪೋರ್ಟಲ್‌ಅನ್ನು ಮೂರು ತಿಂಗಳೊಳಗೆ ಒದಗಿಸಬೇಕು, ಅಲ್ಲಿ ಅಂತಹ ಸೂಚನೆಗಳು, ಉತ್ತರಗಳು ಮತ್ತು ಅಂತಿಮವಾಗಿ ಅಂಗೀಕರಿಸಿದ ಆದೇಶದ ವಿವರಗಳು ಲಭ್ಯ ಇರಬೇಕು.

6. ಸಂಬಂಧಪಟ್ಟ ಅಧಿಕಾರಿ ಸಂತ್ರಸ್ತ ವ್ಯಕ್ತಿಗೆ ವೈಯಕ್ತಿಕ ವಿಚಾರಣೆಯ ಅವಕಾಶ ನೀಡಿ ಅಂತಹ ವಿಚಾರಣೆಯ ನಡಾವಳಿಗಳನ್ನು ದಾಖಲಿಸಿಕೊಳ್ಳಬೇಕು.

7. ಅಂತಿಮ ಆದೇಶ ಜಾರಿಗೊಳಿಸಿದ ನಂತರ, ಅಪರಾಧವು ರಾಜಿಯೋಗ್ಯವಾದ ಅಪರಾಧವೇ ಎನ್ನುವ ಬಗ್ಗೆ ವಿವರಿಸಬೇಕು. ಕಟ್ಟಡ ನಿರ್ಮಾಣದ ಒಂದು ಭಾಗ ಮಾತ್ರ ಅಕ್ರಮ/ಗಂಭೀರ ಸ್ವರೂಫದ ಅಪರಾಧ ಎಂದಿದ್ದಾಗ, ಎಲ್ಲವನ್ನೂ ಏಕೆ ಕೆಡವಬೇಕು ಎಂಬುದನ್ನು ಪರಿಶೀಲಿಸಿ ದಾಖಲಿಸಬೇಕು. ಹೀಗೆ ಹೊರಡಿಸಲಾದ (ಕೆಡವುವ ಅಗತ್ಯವಿದೆಯೇ ಎಂದು ನಿರ್ಧರಿಸುವ) ಆದೇಶಗಳನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು.  

8. ಆದೇಶ ಹೊರಬಿದ್ದ 15 ದಿನಗಳಲ್ಲಿ ಅನಧಿಕೃತ ಕಟ್ಟಡವನ್ನು ಮಾಲೀಕರೇ ತೆರವುಗೊಳಿಸಲು ಅವಕಾಶ ನೀಡಬೇಕು. ಈ 15 ದಿನಗಳ ಅವಧಿ ಮುಗಿದ ನಂತರವೂ ಮಾಲೀಕರು ಕೆಡವದಿದ್ದರೆ ಹಾಗೂ ಯಾವುದೇ ಮೇಲ್ಮನವಿ ಪ್ರಾಧಿಕಾರ ತೆರವು ಕಾರ್ಯಾಚರಣೆಗೆ ತಡೆ ನೀಡದ ಸಂದರ್ಭದಲ್ಲಷ್ಟೇ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಬಹುದು. ಅನಧಿಕೃತ ಮತ್ತು ಗಂಭೀರ ಉಲ್ಲಂಘನೆ ಸ್ವರೂಪದ ಅಕ್ರಮ ಕಟ್ಟಡಗಳನ್ನು ಮಾತ್ರವೇ ತೆರವುಗೊಳಿಸಬೇಕು.

9. ತೆರವು ಕಾರ್ಯಾಚರಣೆಗೂ ಮುನ್ನ ಇಬ್ಬರು ಪಂಚರು (ಸಾಕ್ಷಿಗಳು) ಸಹಿ ಮಾಡಿದ ವಿವರವಾದ ತಪಾಸಣಾ ವರದಿಯನ್ನು ಸಂಬಂಧಿತ ಅಧಿಕಾರಿ ಸಿದ್ಧಪಡಿಸಬೇಕು.

10. ತೆರವು ಕಾರ್ಯಾಚರಣೆ ಪ್ರಕ್ರಿಯೆಗಳನ್ನು ವಿಡಿಯೋಗ್ರಾಫ್ ಮಾಡಬೇಕು. ವಿಡಿಯೋ ಪ್ರತಿಗಳನ್ನು ಸಂರಕ್ಷಿಸಬೇಕು. ಕೆಡವುವ ಪ್ರಕ್ರಿಯೆಯಲ್ಲಿ ಯಾವ ಅಧಿಕಾರಿಗಳು ಅಥವಾ ಪೊಲೀಸ್ ಅಧಿಕಾರಿಗಳು ಇಲ್ಲವೇ ಸಿವಿಲ್ ಸಿಬ್ಬಂದಿ ಭಾಗವಹಿಸಿದ್ದರು ಎಂಬುದನ್ನು ದಾಖಲಿಸಿರುವ ತೆರವು ಕಾರ್ಯಾಚರಣೆ ವರದಿಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಪುರಸಭೆಯ ಆಯುಕ್ತರಿಗೆ ರವಾನಿಸಬೇಕು. ಈ ವರದಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿಯೂ ಪ್ರದರ್ಶಿಸಬೇಕು.

ಈ ನಿರ್ದೇಶನಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. 

Kannada Bar & Bench
kannada.barandbench.com