ಸರ್ಕಾರಿ ಅಧಿಕಾರಿಯ ವಿರುದ್ಧ ತನಿಖೆ ಪೂರ್ಣಗೊಂಡು ನಿರ್ದಿಷ್ಟ ಶಿಕ್ಷೆ ವಿಧಿಸುವಂತೆ ಲೋಕಾಯುಕ್ತರು ಶಿಫಾರಸ್ಸು ಮಾಡಿದ ನಂತರ ಆ ಅಧಿಕಾರಿಗೆ ಕಡಿಮೆ ಶಿಕ್ಷೆ ವಿಧಿಸಲು ಶಿಸ್ತುಪಾಲನಾ ಪ್ರಾಧಿಕಾರಕ್ಕೆ ಇರುವ ಅಧಿಕಾರ ಕೈತಪ್ಪುವುದಿಲ್ಲ ಎಂದು ಕರ್ನಾಟಕ ಈಚೆಗೆ ಹೇಳಿದೆ.
ಎರಡನೇ ಪ್ರತಿವಾದಿಯಾದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಚಂದ್ರಶೇಖರ್ ಅವರಿಗೆ ಶಿಫಾರಸ್ಸು ಮಾಡಿದ್ದಕ್ಕಿಂತ ಕಡಿಮೆ ಶಿಕ್ಷೆ ವಿಧಿಸಿ 2021ರ ಸೆಪ್ಟೆಂಬರ್ 6ರಂದು ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಲೋಕಾಯುಕ್ತರು ಸಲ್ಲಿಸಿದ್ದ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಿರಾಕರಿಸಿದೆ.
“ನಿರ್ದಿಷ್ಟ ಶಿಕ್ಷೆ ವಿಧಿಸಲು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದಾರೆ ಎಂಬ ಕಾರಣಕ್ಕೆ ವಿವೇಚನೆಯನ್ನು ಚಲಾಯಿಸುವ ಶಿಸ್ತು ಪ್ರಾಧಿಕಾರದ ಅಧಿಕಾರವನ್ನು ಕಸಿದುಕೊಳ್ಳಲಾಗುವುದಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
2009ರಲ್ಲಿ 700 ರೂಪಾಯಿ ಲಂಚ ಪಡೆದ ಆರೋಪ ಚಂದ್ರಶೇಖರ್ ಅವರ ಮೇಲಿದೆ. ಚಂದ್ರಶೇಖರ್ ಅವರ ಬಳಿ ಕೆಲಸ ಬಾಕಿ ಇಲ್ಲದಿರುವಾಗ ಅವರು ಲಂಚಕ್ಕೆ ಬೇಡಿಕೆ ಇಡುವ ಸಂದರ್ಭ ನಿರ್ಮಾಣವಾಗದು ಎಂದು ಅವರನ್ನು ಖುಲಾಸೆಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಲೋಕಾಯುಕ್ತ ಕಾಯಿದೆ ಸೆಕ್ಷನ್ 12ರ ಉಪ ಸೆಕ್ಷನ್ 3ರ ಅಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಕರ್ನಾಟಕ ನಾಗರಿಕ ಸೇವೆಗಳ (ಸಿಸಿಎ) ನಿಯಮ 14ಎ ಅಡಿಯಲ್ಲಿ ವಿಚಾರಣೆ ನಡೆಸಲು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸುವಂತೆ ಕೋರಲಾಗಿತ್ತು. 2011ರ ಜುಲೈ 22ರಂದು ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿ ಆದೇಶಿಸಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತರು ಎಸ್‌ಡಿಎ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ಕಡ್ಡಾಯ ನಿವೃತ್ತಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದರು. ಈ ವರದಿಯನ್ನು ಯಥಾವತ್ ಅನುಷ್ಠಾನ ಮಾಡದ ಶಿಸ್ತುಪಾಲನಾ ಪ್ರಾಧಿಕಾರವು ಅರ್ಜಿದಾರರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವುದಕ್ಕೆ ಬದಲಾಗಿ ಹಿಂಬಡ್ತಿ ನೀಡುವ ದಂಡ ವಿಧಿಸಿತ್ತು.
ಇದನ್ನು ವಿರೋಧಿಸಿದ್ದ ಲೋಕಾಯುಕ್ತ ಪರ ವಕೀಲರು “ಒಮ್ಮೆ ಶಿಫಾರಸ್ಸು ಮಾಡಿದ ಬಳಿಕ ಶಿಕ್ಷೆಯ ಕಡಿತವನ್ನು ಕಾನೂನಿನ ಪ್ರಕಾರ ಮಾತ್ರ ಮಾಡಬೇಕು. ಅರ್ಜಿದಾರರ ವಿರುದ್ಧ ದಂಡವನ್ನು ಯಾವ ಕಾರಣಕ್ಕಾಗಿ ಕಡಿತ ಮಾಡಲಾಗಿದೆ ಎಂದು ಹೇಳಲಾಗಿಲ್ಲ” ಎಂದು ಆಕ್ಷೇಪಿಸಿತ್ತು.
ಇದನ್ನು ವಿರೋಧಿಸಿದ್ದ ಸರ್ಕಾರವು “ದಂಡ ವಿಧಿಸಬೇಕೆ ಅಥವಾ ಬೇಡವೇ ಎಂಬುದು ಶಿಸ್ತುಪಾಲನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಲೋಕಾಯುಕ್ತರು ಬಾಧಿತರಾಗುವುದಿಲ್ಲ” ಎಂದು ವಾದಿಸಿತ್ತು. ಈ ವಾದನ್ನು ಹೈಕೋರ್ಟ್ ಮಾನ್ಯ ಮಾಡಿದೆ.