ಮಹಿಳೆಯರು, ಎಲ್‌ಜಿಬಿಟಿ, ವಲಸೆ ಕಾರ್ಮಿಕರು ಕಾನೂನು ಪರಿಹಾರ ಪಡೆಯಲು ಎದುರಿಸುವ ಅಡೆತಡೆ ಬಗ್ಗೆ ಗಮನಸೆಳೆದ 'ನ್ಯಾಯ' ಸಭೆ

ಬೆಂಗಳೂರಿನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 'ನ್ಯಾಯ' ವೇದಿಕೆಯು ನಡೆಸಿದ ಸಮಾಲೋಚನಾ ಸಭೆಯಲ್ಲಿ ನ್ಯಾಯಾಂಗ, ಪೊಲೀಸ್‌, ಸರ್ಕಾರ, ಕಾನೂನು ಶಾಲೆಗಳು, ಸಮಾಜದ ವಿವಿಧ ಸಂಘಟನೆಗಳ ಬದಲಾವಣೆಯ ಹರಿಕಾರರು ಪಾಲ್ಗೊಂಡು ತಮ್ಮ ಅನಿಸಿಕೆ ಹಂಚಿಕೊಂಡರು.
Nyaaya
Nyaaya
Published on

ನ್ಯಾಯದಾನ ಪಡೆಯುವ ವೇಳೆ ಸಮಾಜದ ಅಂಚಿನಲ್ಲಿರುವ ಸಮುದಾಯಗಳು, ಜನಸಾಮಾನ್ಯರು ಎದುರಿಸುವ ಸಾಮಾಜಿಕ ಮತ್ತು ವ್ಯವಸ್ಥೆಯಲ್ಲಿನ ಸವಾಲುಗಳ ಕುರಿತು ಇತ್ತೀಚೆಗೆ 'ನ್ಯಾಯ' ವೇದಿಕೆಯು ನಡೆಸಿದ ಸಮಾಲೋಚನಾ ಸಭೆಯಲ್ಲಿ ಬೆಳಕು ಚೆಲ್ಲಲಾಯಿತು.

ನಾಗರಿಕರಿಗೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅಂತಹ ಹಕ್ಕುಗಳನ್ನು ಜಾರಿಗೊಳಿಸಲು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ 'ನ್ಯಾಯ' ವೇದಿಕೆ ಆರಂಭವಾಗಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದಿಕೆಯು ಇತ್ತೀಚೆಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ನ್ಯಾಯಾಂಗ, ಪೊಲೀಸ್‌, ಸರ್ಕಾರ, ಕಾನೂನು ಶಾಲೆಗಳು, ಸಮಾಜದ ವಿವಿಧ ಸಂಘಟನೆಗಳ ಬದಲಾವಣೆಯ ಹರಿಕಾರರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಲ್‌ಜಿಬಿಟಿಕ್ಯು ಸಮುದಾಯದವರು ಪೊಲೀಸರಿಂದ ನಿಂದನೆ ಮತ್ತು ಶಿಕ್ಷೆಗೆ ಗುರಿಯಾಗುವ ಭಯದಿಂದ ದೂರು ನೀಡಲು ಹೆದರುತ್ತಾರೆ. ಇನ್ನು ವಲಸೆ ಕಾರ್ಮಿಕರು ಎದುರಿಸುತ್ತಿರುವ ಗುರುತಿನ ಚೀಟಿಯ ಸಮಸ್ಯೆಯಿಂದಾಗಿ ಅವರ ಮಕ್ಕಳಿಗೆ ಶಾಲಾ ಪ್ರವೇಶಾತಿ ದೊರಕುತ್ತಿಲ್ಲ. ಅದೇ ರೀತಿ, ಮಹಿಳೆಯರು ಮನೆಯಿಂದ ಹೊರಹೋಗದಿರುವ ಸ್ಥಿತಿ ಇರುವುದರಿಂದ ಹಾಗೂ ಅವರಿಗೆ ಅಗತ್ಯ ಸಂಪನ್ಮೂಲಗಳು ಕೈಗೆಟುಕದೇ ಇರುವುದರಿಂದ ಕಾನೂನಾತ್ಮಕ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ನ್ಯಾಯಾದಾನ ಪಡೆಯಲು ಎರವಾಗುವ ಅನೇಕ ವಾಸ್ತವಿಕ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

“ಕಾನೂನಾತ್ಮಕ ಹಕ್ಕುಗಳು ಎಲ್ಲರಿಗೂ ದಕ್ಕುವಂತೆ ಖಾತರಿಪಡಿಸುವ ನಿಟ್ಟಿನಲ್ಲಿ ಸಂಬಂಧಿತ ಕ್ಷೇತ್ರಗಳ ಪ್ರಮುಖರನ್ನು ಒಂದೆಡೆ ಸೇರಿಸಿ ಪರಿಹಾರ ಹುಡುಕು ಕೆಲಸವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇದನ್ನು ಒಂದು ಬಾರಿಯ ಕಾರ್ಯಕ್ರಮವನ್ನಾಗಿ ನೋಡಲಾಗದು” ಎಂದು ನ್ಯಾಯ ತಂಡದ ಮುಖ್ಯಸ್ಥರಾದ ಅನೀಷಾ ಗೋಪಿ ಕಾರ್ಯಕ್ರಮದ ಆಶಯದ ಬಗ್ಗೆ ಹೇಳಿದರು.

ಕಾನೂನಾತ್ಮಕ ಪರಿಹಾರ ಪಡೆಯುವ ನಿಟ್ಟಿನಲ್ಲಿ ಮೊದಲಿಗೆ ಯಾರನ್ನು ಸಂಪರ್ಕಿಸಬೇಕು (ಪಿಒಸಿ) ಎಂಬುದು ನಾಗರಿಕರಿಗೆ ತಿಳಿದಿಲ್ಲ. ಒಂದೊಮ್ಮೆ ಯಾರನ್ನು ಸಂಪರ್ಕಿಸಬೇಕು ಎನ್ನುವುದು ತಿಳಿದಿದ್ದರೂ ಅವರೆಡಿಗಿನ ಭಯ, ಅವಿಶ್ವಾಸಗಳಿಂದಾಗಿ ಸಂತ್ರಸ್ತರು ಮುಂದುವರೆಯಲು ತೊಡಕಾಗುತ್ತದೆ. ಪಿಒಸಿಗಳಲ್ಲಿನ ಸಹಾನುಭೂತಿಯ ಕೊರತೆ, ಭಾರಿ ಭ್ರಷ್ಟಾಚಾರ ಮತ್ತು ಹೊಣೆಗಾರಿಕೆ ಇಲ್ಲದಿರುವುದೂ ಸಹ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವ ಅಂಶಗಳು ಸಮಾಲೋಚನೆಯ ವೇಳೆ ಮುನ್ನೆಲೆಗೆ ಬಂದವು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪುಷ್ಪಾ ಮುದ್ದುಲಿಂಗಣ್ಣವರ್‌ ಅವರು ಜಿಲ್ಲಾ ಹಂತಗಳಲ್ಲಿ ಎದುರಾಗುವ ಸಿಬ್ಬಂದಿ ಹಾಗೂ ಸೂಕ್ತ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಗಮನಸೆಳೆದರು. ಜೊತೆಗೆ ಕೇಂದ್ರ ಸರ್ಕಾರ ಅನುದಾನ ದೊರೆಯುವಲ್ಲಿನ ವಿಳಂಬದ ಬಗ್ಗೆಯೂ ಬೆರಳು ಮಾಡಿದರು.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಸಿಐಡಿಯ ನಿವೃತ್ತ ಡಿಜಿಪಿ ಸುನೀಲ್‌ ಕುಮಾರ್‌, ಕಾನೂನು ಮತ್ತು ದತ್ತಿ ಸಂಸ್ಥೆಗಳ ಸದಸ್ಯರು, ಬೆಸ್ಟ್‌ ಪ್ರಾಕ್ಟೀಸ್‌ ಫೌಂಡೇಶನ್‌, ಸಿಚ್ರೆಮ್‌, ಸಾಲಿಡಾರಿಟಿ ಫೌಂಡೇಶನ್‌, ಹಸಿರು ದಳ, ಎನೇಬಲ್‌ ಇಂಡಿಯಾ, ವಿಮೋಚನಾ, ಶ್ರೀ ಜಾಗೃತಿ ಸಮಿತಿ, ಸಿವಿಕ್‌ ಮತ್ತು ನ್ಯಾಯ ತಂಡದ ಜಿಲ್ಲಾ ಮಟ್ಟದ ವಕೀಲರು ಭಾಗವಹಿಸಿದ್ದರು.

Kannada Bar & Bench
kannada.barandbench.com