ಹಣ ಇದ್ದರೂ ಚೆಕ್‌ ಅಮಾನ್ಯ: ದಂಪತಿಗೆ ₹15 ಲಕ್ಷ ಪರಿಹಾರ ನೀಡಲು ಎಚ್ಎಸ್‌ಬಿಸಿ ಬ್ಯಾಂಕ್‌ಗೆ ಎನ್‌ಸಿಡಿಆರ್‌ಸಿ ಆದೇಶ

ದೂರುದಾರರನ್ನು ಹೆಚ್ಚಿನ ಅಪಾಯದ ಗ್ರಾಹಕರು ಎಂದು ಬ್ಯಾಂಕ್ ವರ್ಗೀಕರಿಸಲು ಹಾಗೂ ಎರಡು ವರ್ಷಗಳಿಗೊಮ್ಮೆ ಕೆವೈಸಿ ನವೀಕರಿಸುವಂತೆ ವಿನಂತಿಸಲು ಯಾವುದೇ ಆಧಾರ ಇಲ್ಲ ಎಂದು ಆಯೋಗ ತಿಳಿಸಿದೆ.
Kerala High Court
Kerala High Court
Published on

ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ ಚೆಕ್‌ಗಳನ್ನು ನಿರಾಕರಿಸಿ ದಂಪತಿಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ₹ 15 ಲಕ್ಷ ಪಾವತಿಸುವಂತೆ ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಇತ್ತೀಚೆಗೆ ಸೂಚಿಸಿದೆ [ಅನಿಲ್‌ ಮಿಲ್ಖಿರಾಮ್‌ ಗೋಯೆಲ್‌ ಮತ್ತಿತ್ತರರು ಹಾಗೂ ಎಚ್‌ಎಸ್‌ಬಿಸಿ ಲಿಮಿಟೆಡ್‌ ನಡುವಣ ಪ್ರಕರಣ].

ದಂಪತಿ ಸುಮಾರು ₹ 1,80,000 ಸಾಲ ತೀರಿಸಲು ವಿಫಲರಾಗಿದ್ದು ಅವರು ತಮ್ಮ ʼನೋ ಯುವರ್‌ ಕಸ್ಟಮರ್‌ʼ (ನಿಮ್ಮ ಗ್ರಾಹಕರನ್ನು ಅರಿಯಿರಿ - ಕೆವೈಸಿ) ವಿವರ ನವೀಕರಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ ದೂರುದಾರರ ಖಾತೆ ಸ್ಥಗಿತಗೊಳಿಸಿತ್ತು.

ಆರ್‌ಬಿಐ ಮಾರ್ಗಸೂಚಿಗಳ ಅನ್ವಯ ದೂರುದಾರರನ್ನು ಹೆಚ್ಚಿನ ಅಪಾಯದ ಗ್ರಾಹಕರು ಎಂದು ವರ್ಗೀಕರಿಸಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಅವರ ಕೆವೈಸಿ ನವೀಕರಿಸಲು ಸೂಚಿಸುವುದಕ್ಕೆ ಬ್ಯಾಂಕ್‌ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಆಯೋಗ ಹೇಳಿದೆ. ಅರ್ಜಿದಾರರ ಎರಡೂ ಸಾಲದ ಖಾತೆಗಳು 2009 ಮತ್ತು 2010 ರಲ್ಲಿ ಕೊನೆಗೊಂಡಿದ್ದು, ಮುಕ್ತಾಯಗೊಂಡಿವೆಎಂದು ಆಯೋಗ ಹೇಳಿದೆ.

ನವೆಂಬರ್ 2015ರಲ್ಲಿ ಎಟಿಎಂ ಯಂತ್ರದಿಂದ ಹಣ ಪಡೆಯಲು ಪ್ರಯತ್ನಿಸಿದಾಗ, ತಮ್ಮ ವ್ಯವಹಾರವನ್ನು ನಿರಾಕರಿಸಲಾಗಿತ್ತು. ಈ ಸಂಬಂಧ ಬ್ಯಾಂಕನ್ನು ಸಂಪರ್ಕಿಸಿದಾಗ, ಕೆವೈಸಿ ವಿವರಗಳನ್ನು ರೂಢಿಯಂತೆ ನವೀಕರಿಸದ ಕಾರಣ ವಹಿವಾಟು ಸ್ಥಗಿತಗೊಂಡಿದೆ ಎಂದು ತಿಳಿಸಲಾಯಿತು ಎಂಬುದಾಗಿ ಅನಿಲ್ ಮತ್ತು ನೀಲಂ ಗೋಯೆಲ್ ದೂರಿನಲ್ಲಿ ವಿವರಿಸಿದ್ದರು.

ತಾವು ಮೇ 2015ರಲ್ಲಿ ಕೆವೈಸಿ ವಿವರ ನವೀಕರಿಸಿದ್ದರೂ ಪುನಃ ನವೀಕರಿಸಲು ಮುಂಬೈ ಬಂದರಿನಲ್ಲಿರುವ ಬ್ಯಾಂಕ್‌ ಶಾಖೆಗೆ ತೆರಳಿದ್ದೆವು. ಅಲ್ಲಿ ಉಳಿತಾಯ ಖಾತೆಗೆ ಲಿಂಕ್ ಮಾಡಿದ ಸಾಲಗಳಲ್ಲಿ ಇನ್ನೂ ತೀರಿಸಬೇಕಾದ ಬಾಕಿ ಮೊತ್ತವಿದೆ ಎಂದು ತಮಗೆ ತಿಳಿಸಲಾಯಿತು ಎಂದು ದೂರುದಾರರು ಹೇಳಿದ್ದರು.

ಸಾಲ ಇದಾಗಲೇ ತೀರಿದ್ದು ಬ್ಯಾಂಕ್‌ ಕಡೆಯಿಂದ ಸೇವಾ ಲೋಪ ಉಂಟಾಗಿರುವುದರಿಂದ 3.55 ಕೋಟಿ  ರೂ ಪರಿಹಾರ ಕೋರಿ 2016ರಲ್ಲಿ ದೂರುದಾರರು ಎನ್‌ಸಿಡಿಆರ್‌ಸಿ ಮೆಟ್ಟಿಲೇರಿದ್ದರು. ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಬ್ಯಾಂಕ್‌, ಸಾಲದ ಖಾತೆಗಳು ಇತ್ಯರ್ಥಗೊಂಡಿದೆ. ಆದರೂ ಕೆವೈಸಿ ವಿವರ ನವೀಕರಿಸದ ಕಾರಣ ಖಾತೆಯನ್ನು ನಿರ್ಬಂಧಿಸಲಾಗಿದೆ. ಅನಿಲ್ ಕೆವೈಸಿ ದಾಖಲೆಗಳನ್ನು ನೀಡಿದ್ದರೂ ನೀಲಂ ನೀಡಿರಲಿಲ್ಲ. ಇದು ದೂರುದಾರರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು ಕಾರಣ ಎಂದು ಹೇಳಿತ್ತು.

ಸಾಲದ ಖಾತೆಗಳು ಇತ್ಯರ್ಥಗೊಂಡಿದೆ ಎಂದು ಬ್ಯಾಂಕ್‌ ಒಪ್ಪಿರುವುದನ್ನು ಗಮನಿಸಿದ ಆಯೋಗ ಅನಿಲ್ ಕೆವೈಸಿ ದಾಖಲೆಗಳನ್ನು ನೀಡಿದ್ದರೂ ನೀಲಂ ನೀಡಿರಲಿಲ್ಲ ಎಂದು ಬ್ಯಾಂಕ್‌ ಹೇಳಿದೆ. ಜಂಟಿ ಉಳಿತಾಯ ಖಾತೆ ನಿರ್ಬಂಧಿಸುವ ಬ್ಯಾಂಕಿನ ಕ್ರಮ ನ್ಯಾಯಸಮ್ಮತವಲ್ಲ ಎಂದು ಎನ್‌ಸಿಡಿಆರ್‌ಸಿ ಕಂಡುಕೊಂಡಿದ್ದು ಚೆಕ್‌ ಅಮಾನ್ಯಗೊಂಡಿರುವುದರಿಂದ ಕ್ರಿಮಿನಲ್‌ ಕ್ರಮ ಜರುಗಿಸುವುದಾಗಿ ಬ್ಯಾಂಕ್‌ ಹೇಳಿದ್ದು ದೂರುದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ಅರ್ಜಿದಾರರ ಪ್ರಕರಣದಲ್ಲಿ ಬ್ಯಾಂಕ್ ನಿರ್ಲಕ್ಷ್ಯ ವಹಿಸಿದ್ದು ಅದು ಸೇವಾ ಲೋಪ ಎಸಗಿದೆ. ಇದರಿಂದ ದೂರುದಾರರಿಗೆ ಅನಧಿಕೃತ ಅವಮಾನ ಉಂಟು ಮಾಡಿ ಮುಜುಗರ ಎದುರಿಸುವಂತಾಗಿದೆ ಜೊತೆಗೆ ಅವರ ಪ್ರತಿಷ್ಠೆಗೆ ಧಕ್ಕೆ ಒದಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು. ಅಂತಿಮವಾಗಿ, ಅರ್ಜಿದಾರರಿಗೆ ₹15 ಲಕ್ಷ ಪರಿಹಾರ ಮತ್ತು ₹1 ಲಕ್ಷ ವ್ಯಾಜ್ಯ ವೆಚ್ಚ ನೀಡುವಂತೆ ಆದೇಶಿಸಿತು. ಅಲ್ಲದೆ, ಇದಾಗಲೇ ಇತ್ಯಾರ್ಥಗೊಂಡಿರುವ ಸಾಲಕ್ಕೆ ಮತ್ತೆ ಬೇಡಿಕೆ ಇರಿಸದೆ ದೂರುದಾರರ ಖಾತೆಯ ಮೇಲಿನ ನಿರ್ಬಂಧ ತೆಗೆದುಹಾಕಲು ಅದು ಬ್ಯಾಂಕ್‌ಗೆ ತಾಕೀತು ಮಾಡಿತು.

Kannada Bar & Bench
kannada.barandbench.com