ಸುಳ್ಳು ಮಾಹಿತಿ ಜನರನ್ನು ಧ್ರುವೀಕರಿಸುತ್ತಿದೆ: ನ್ಯಾ. ಕೆ ವಿ ವಿಶ್ವನಾಥನ್ ಆತಂಕ

ಅಭಿಪ್ರಾಯ ಭೇದ ಅಥವಾ ವಿವಾದಾತ್ಮಕ ದೃಷ್ಟಿಕೋನ ಹತ್ತಿಕ್ಕುವಿಕೆ ವಿರುದ್ಧ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.
Justice KV Viswanathan
Justice KV Viswanathan

ಡಿಜಿಟಲ್ ಯುಗದಲ್ಲಿ ಸುಳ್ಳು ಮಾಹಿತಿ ಜನರನ್ನು ಧ್ರುವೀಕರಿಸುತ್ತಿದ್ದು ಕಾನೂನು ವೃತ್ತಿಪರರು ಜವಾಬ್ದಾರಿಯುತ ಸಂವಾದವನ್ನು ಪ್ರೋತ್ಸಾಹಿಸುವಂತಹ ಹಾಗೂ ಸುಳ್ಳು ಹರಡುವವರನ್ನು ಹೊಣೆಗಾರರನ್ನಾಗಿಸುವಂತಹ ಅಗತ್ಯವಾದ ಚೌಕಟ್ಟು ರೂಪಿಸಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಕರೆ ನೀಡಿದರು.

ಕೊಚ್ಚಿಯ ಕೇರಳ ಹೈಕೋರ್ಟ್‌ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ನ್ಯಾಯಮೂರ್ತಿ ಟಿ ಎಸ್ ಕೃಷ್ಣಮೂರ್ತಿ ಅಯ್ಯರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸದ ಪ್ರಮುಖಾಂಶಗಳು

  • ವಿಚಾರಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸುವ ಹಕ್ಕು ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲಾಧಾರವಾಗಿದ್ದರೂ, ಸುಳ್ಳು ಮಾಹಿತಿ ಆ ಮೌಲ್ಯಗಳ ತಳಹದಿಯನ್ನೇ ನಾಶಪಡಿಸುತ್ತದೆ.

  • ಕಾನೂನು ವೃತ್ತಿಪರರು ನ್ಯಾಯಸಮ್ಮತ ಅಭಿವ್ಯಕ್ತಿಗೆ ಅಡ್ಡಿಯಾಗದಂತೆ ಸತ್ಯವನ್ನು ರಕ್ಷಿಸುವ ಕ್ರಮಗಳನ್ನು ಪ್ರತಿಪಾದಿಸುವುದು ಅನಿವಾರ್ಯವಾಗಿದೆ.

  • ಮಾಹಿತಿ ಎಲ್ಲಿಂದ ಬರುತ್ತಿದೆ ಹಾಗೂ ಅದು ಕಪೋಲಕಲ್ಪಿತವೋ ವಾಸ್ತವವೋ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಏಕಪಕ್ಷೀಯವಾಗಿ ಸುಳ್ಳು ಮಾಹಿತಿ ನೀಡಲಾಗುತ್ತಿದ್ದು ಜನ ಅದನ್ನು ಪರಿಶೀಲಿಸದೆಯೇ ನಂಬುತ್ತಿದ್ದು, ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

  • ಅಂತಹ ಸುಳ್ಳು ಮಾಹಿತಿಗೆ ಕಡಿವಾಣ ಹಾಕದಿದ್ದರೆ ವಿಶ್ವಾಸದ ಕೊರತೆ ಎಂಬುದು ಗಂಭೀರ ದೊಡ್ಡ ಸಮಸ್ಯೆಯಾಗುತ್ತದೆ.

  • ಸೆನ್ಸಾರ್‌ಶಿಪ್‌ ಮತ್ತು ಸುಳ್ಳು ಮಾಹಿತಿ ನಡುವಿನ ಗೆರೆ ತೆಳುವಾಗಿದ್ದು ಹಾನಿಕಾರಕ ವಿಷಯವನ್ನು ತೆಗೆದುಹಾಕುವುದು ನಿರ್ಣಾಯಕವಾಗಿದ್ದರೂ, ನ್ಯಾಯಸಮ್ಮತವಾದ ಸಂವಾದ ಮತ್ತು ವೈವಿಧ್ಯಮಯ ಅಭಿಪ್ರಾಯಗಳನ್ನು ನಿಗ್ರಹಿಸುವ ಅಪಾಯವಿದೆ. ಅಭಿಪ್ರಾಯ ಭೇದ ಅಥವಾ ವಿವಾದಾತ್ಮಕ ದೃಷ್ಟಿಕೋನ ಹತ್ತಿಕ್ಕುವಿಕೆ ವಿರುದ್ಧ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.

  • ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದರ ಕುರಿತು ವಿಭಿನ್ನ ಗುಂಪುಗಳು ಸಂಘರ್ಷಾತ್ಮಕ ದೃಷ್ಟಿಕೋನ ಹೊಂದಿರುವುದರಿಂದ ಸುಳ್ಳು ಮಾಹಿತಿ ಎನ್ನುವುದು ವ್ಯಕ್ತಿನಿಷ್ಠವಾಗಿರಬಹುದು. ಈ ವಿಚಾರದಲ್ಲಿ ಅಧಿಕೃತ ಮೂಲಗಳು ಸಹ ಐಕ್ಯಮತ ಹೊಂದಿಲ್ಲದೆ ಇರಬಹುದು. ಈ ಸಂಕೀರ್ಣತೆಯು ಕೆಲಸವನ್ನು ಮತ್ತಷ್ಟು ಸವಾಲಿಗೊಳಪಡಿಸುತ್ತದೆ.

  • ದ್ವೇಷದ ಮಾತುಗಳಿಗೆ ಸಾಮರಸ್ಯದ ಸಂವಾದವೇ ಉತ್ತರವಾಗಬೇಕು. ದ್ವೇಷ ಭಾಷಣವನ್ನು ನಿಗ್ರಹಿಸುವ ಬದಲು ಸಾಮರಸ್ಯದ ಮಾತುಕತೆಯನ್ನು ಹೆಚ್ಚಿಸಬೇಕು.

Kannada Bar & Bench
kannada.barandbench.com