ಡಿಕೆಶಿ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ಪರ ವಕೀಲರು ಗೈರು; ವಿಚಾರಣೆ ಮುಂದೂಡಿದ ಹೈಕೋರ್ಟ್‌

ಸಿಬಿಐ ಪರ ಕಿರಿಯ ವಕೀಲರು ಹಾಜರಾಗಿ ವಿಚಾರಣೆ ಮುಂದೂಡುವಂತೆ ಕೋರಿದರು. ಇದಕ್ಕೆ ಡಿ ಕೆ ಶಿವಕುಮಾರ್ ಪರ ವಕೀಲರಿಂದ ಆಕ್ಷೇಪ ವ್ಯಕ್ತವಾಯಿತು.
D K Shivakumar, CBI and Karnataka HC
D K Shivakumar, CBI and Karnataka HC
Published on

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಶಿವಕುಮಾರ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಮನವಿ ಮಾಡಿದರು.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಹಾಜರಿರಲಿಲ್ಲ. ಅವರ ಪರ ಕಿರಿಯ ವಕೀಲರು ಹಾಜರಾಗಿ ವಿಚಾರಣೆ ಮುಂದೂಡುವಂತೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಕುಮಾರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್ ಜಾಧವ್‌ ಅವರು ಸಿಬಿಐ ಪರ ವಕೀಲರ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ, ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಪೀಠಕ್ಕೆ ಮನವಿ ಮಾಡಿದರು. ಆದರೆ, ಸಿಬಿಐ ಪರ ವಕೀಲರ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.

ಕಳೆದ ವಿಚಾರಣೆ ವೇಳೆ ಸಿ ಎಚ್‌ ಜಾಧವ್‌ ಅವರು ಶಾಸಕ ಡಿ ಕೆ ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಕಾರಣಕ್ಕಾಗಿ ಕಿರುಕುಳ ನೀಡಲಾಗುತ್ತಿದ್ದು, ಅವರ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಹೇಗಾದರೂ ಮಾಡಿ ಅವರಿಗೆ ತೊಂದರೆ ನೀಡಬೇಕು ಎಂದು ಸತಾಯಿಸಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದ್ದರು.

Also Read
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಪ್ರತ್ಯುತ್ತರ ದಾಖಲಿಸಲು ಡಿ ಕೆ ಶಿವಕುಮಾರ್‌ ಪರ ವಕೀಲರಿಗೆ ಅನುಮತಿಸಿದ ಹೈಕೋರ್ಟ್‌

ಅರ್ಜಿದಾರರು ಸಾರ್ವಜನಿಕ ಸೇವಕ. ಅವರ ವಿರುದ್ಧ ದಾಖಲಿಸಿರುವ ಈ ಪ್ರಕರಣದಲ್ಲಿ ಅವರ ಕುಟುಂಬದ ಸದಸ್ಯರೆಲ್ಲರ ಆದಾಯವನ್ನು ಪರಿಗಣಿಸಲಾಗಿದೆ. ಜಾಮೀನು ದೊರೆತ ಮೇಲೆ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಕೇಸು ದಾಖಲಿಸಿದೆ. ಇದೆಲ್ಲಾ ಅರ್ಜಿದಾರರಿಗೆ ಕೇವಲ ಕಿರುಕುಳ ನೀಡಬೇಕು ಎಂಬ ದುರುದ್ದೇಶದಿಂದ ಕೈಗೊಂಡಿರುವ ಕ್ರಮವಾಗಿದೆ ಎಂದು ಬಲವಾಗಿ ಆಕ್ಷೇಪಿಸಿದ್ದರು.

Kannada Bar & Bench
kannada.barandbench.com