ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕೆಪಿಸಿಸಿ ಅಧ್ಯಕ್ಷನಾಗಿರುವುದಕ್ಕೆ ಕಿರುಕುಳ, ಹೈಕೋರ್ಟ್‌ನಲ್ಲಿ ಡಿಕೆಶಿ ಪರ ವಕೀಲರ ವಾದ

ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ಈಗಾಗಲೇ ಆದಾಯ ತೆರಿಗೆ ಇಲಾಖೆಯು ಮೂರ್ನಾಲ್ಕು ಪ್ರಕರಣ ದಾಖಲಿಸಿದೆ. ಜಾರಿ ನಿರ್ದೇಶನಾಲಯವು ಎರಡು ಪ್ರಕರಣ ದಾಖಲಿಸಿದೆ ಎಂದು ಪೀಠಕ್ಕೆ ವಿವರಿಸಿದ ಡಿಕೆಶಿ ಪರ ವಕೀಲರು.
D K Shivakumar, CBI and Karnataka HC
D K Shivakumar, CBI and Karnataka HC
Published on

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಕುರಿತು ಕೇಂದ್ರ ತನಿಖಾ ದಳವು (ಸಿಬಿಐ) ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಶಃ ವಾದ ಆಲಿಸಿರುವ ಕರ್ನಾಟಕ ಹೈಕೋರ್ಟ್‌, ವಿಚಾರಣೆಯನ್ನು ನವೆಂಬರ್‌ 25ಕ್ಕೆ ಮುಂದೂಡಿದೆ.

ಸಿಬಿಐ ತನಿಖೆಗೆ ಆಕ್ಷೇಪಿಸಿ ಡಿ ಕೆ ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ಡಿ ಕೆ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಿ ಎಚ್‌ ಜಾಧವ್‌ ಮತ್ತು ಸಂದೇಶ್‌ ಚೌಟ ಅವರು “ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ಈಗಾಗಲೇ ಆದಾಯ ತೆರಿಗೆ ಇಲಾಖೆಯು ಮೂರ್ನಾಲ್ಕು ಪ್ರಕರಣ ದಾಖಲಿಸಿದೆ. ಜಾರಿ ನಿರ್ದೇಶನಾಲಯವು ಎರಡು ಪ್ರಕರಣ ದಾಖಲಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷನಾಗಿರುವುದಕ್ಕೆ ಕಿರುಕುಳ ನೀಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.

ಮುಂದುವರಿದು, “ಡಿ ಕೆ ಶಿವಕುಮಾರ್‌ ಮತ್ತು ಅವರ ಕುಟುಂಬ ಸದಸ್ಯರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಇ)ರ ಅಡಿ ಕುಟುಂಬ ಸದಸ್ಯರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗದು” ಎಂದು ವಾದಿಸಿದರು.

ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಹಾಜರಿದ್ದರು. ಅರ್ಜಿದಾರರ ಪರ ವಕೀಲರ ವಾದವನ್ನು ಕೆಲ ಕಾಲ ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 25ಕ್ಕೆ ಮುಂದೂಡಿತು.

Also Read
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಪ್ರತ್ಯುತ್ತರ ದಾಖಲಿಸಲು ಡಿ ಕೆ ಶಿವಕುಮಾರ್‌ ಪರ ವಕೀಲರಿಗೆ ಅನುಮತಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನಲೆ: 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ಕಾನೂನು ಬಾಹಿರವಾಗಿದೆ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ನನ್ನ ಕುಟುಂಬದ ಸದಸ್ಯರ ಹೆಸರನ್ನೂ ಸೇರ್ಪಡೆ ಮಾಡಿರುವುದು ತಪ್ಪು. ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆ ಕೇವಲ ಸಾರ್ವಜನಿಕ ಸೇವಕರಿಗೆ ಮಾತ್ರವೇ ಅನ್ವಯ ಆಗುತ್ತದೆ. ಕುಟುಂಬದ ಸದಸ್ಯರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿರುವುದು ಕಾನೂನಿಗೆ ವಿರುದ್ಧವಾದ ಕ್ರಮವಾಗಿದೆ. ಆದ್ದರಿಂದ, ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಶಿವಕುಮಾರ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Kannada Bar & Bench
kannada.barandbench.com