ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ತನಿಖೆಗೆ ಸಹಕರಿಸಲು ಕೆಎಎಸ್‌ ಅಧಿಕಾರಿ ಡಾ. ಸುಧಾಗೆ ಹೈಕೋರ್ಟ್‌ ನಿರ್ದೇಶನ

ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ದೂರು ಆಧರಿಸಿ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ಭ್ರಷ್ಟಾಚಾರ ನಿರೋಧಕ ಕಾಯಿದೆ ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯವು 2020ರ ಆಗಸ್ಟ್‌ 20ರಂದು ಆದೇಶಿಸಿತ್ತು.
Justice M Nagaprasanna and Karnataka HC
Justice M Nagaprasanna and Karnataka HC
Published on

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸಹಾಯಕ ಆಯುಕ್ತೆ ಮತ್ತು ಭೂಸ್ವಾಧೀನಾಧಿಕಾರಿಯಾಗಿದ್ದ ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಅಧಿಕಾರಿ ಡಾ. ಸುಧಾ ತನಿಖೆಗೆ ಸಹಕರಿಸದಿದ್ದರೆ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ಲೋಕಾಯುಕ್ತಕ್ಕೆ ನಿರ್ಬಂಧಿಸಿರುವ ಮಧ್ಯಂತರ ಆದೇಶವು ತೆರವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ದೂರು ಆಧರಿಸಿ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯವು 2020ರ ಆಗಸ್ಟ್‌ 20ರಂದು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ನಿರ್ದೇಶಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಡಾ. ಸುಧಾ ಮತ್ತು ಆಕೆಯ ಸಹಾಯಕ ಸ್ಟ್ರೋನಿ ಜೋಸೆಫ್‌ ಪಿಯಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಲೋಕಾಯುಕ್ತ ಪೊಲೀಸ್‌ ಪರವಾಗಿ ಹಾಜರಾಗಿದ್ದ ವಕೀಲ ಬಿ ಲತೀಫ್‌ ಅವರು “ನ್ಯಾಯಾಲಯದ ಆದೇಶದ ಹೊರತಾಗಿಯೂ ಸುಧಾ ಅವರು ತನಿಖೆಗೆ ಸಹಕರಿಸುತ್ತಿಲ್ಲ” ಎಂದರು.

ಆಗ ಅರ್ಜಿದಾರರ ಪರ ವಕೀಲ “ವಿಶೇಷ ನ್ಯಾಯಾಲಯವು ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಇದಲ್ಲದೇ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 5ರ ಅಡಿಯೂ ಪ್ರಕರಣ ದಾಖಲಾಗಿರುವುದರಿಂದ ಪಿಸಿಎ ಕಾಯಿದೆ ಅಡಿಯ ವಿಶೇಷ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ಪ್ರಕರಣಗಳ ವಿಚಾರಣೆ ನಡೆಸುವ ಸತ್ರ ನ್ಯಾಯಾಲಯದ ಮುಂದೆ ಇಡಬೇಕು. ಅಲ್ಲದೇ, ಸರ್ಕಾರಿ ಅಧಿಕಾರಿಯಾಗಿರುವ ಸುಧಾ ವಿರುದ್ಧ ತನಿಖೆ ನಡೆಸುವಾಗ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಪಡೆಯಬೇಕು. ಆದರೆ, ಅದನ್ನೂ ಪಾಲಿಸಲಾಗಿಲ್ಲ” ಎಂದರು.

ಆಗ ಪೀಠವು “ಈ ಪ್ರಕರಣದಲ್ಲಿ ಇದಕ್ಕೆ ಪೂರ್ವಾನುಮತಿಯೇ ಬೇಕಿಲ್ಲ. ಗೊತ್ತಿರುವ ಮೂಲಗಳಿಂದ ಆದಾಯ ಮೀರಿದ ಆಸ್ತಿ ಗಳಿಕೆ ಮಾಡಿದ್ದರೆ ಸೆಕ್ಷನ್‌ 17ಎ ಅಡಿ ಪೂರ್ವನುಮತಿಯೇ ಬೇಕಿಲ್ಲ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಪ್ರಕರಣಗಳಲ್ಲಿ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಕಡ್ಡಾಯ ಎಂದು ನಾನೇ ಆದೇಶ ಮಾಡಿದ್ದೇನೆ” ಎಂದಿತು.

ಅಂತಿಮವಾಗಿ ನ್ಯಾಯಾಲಯವು “ಅರ್ಜಿದಾರರ ಪರ ವಕೀಲರು ಶಾಸನದಲ್ಲಿನ ದೋಷಗಳನ್ನು (ಅಬರೇಷನ್‌) ಉಲ್ಲೇಖಿಸಿದ್ದಾರೆ. ಅವುಗಳನ್ನು ಮುಂದಿನ ವಿಚಾರಣೆಯ ವೇಳೆ ಪರಿಗಣಿಸಲಾಗುವುದು. ಸುಧಾ ಅವರು ತನಿಖೆಗೆ ಸಹಕರಿಸಬೇಕು. ಇಲ್ಲವಾದಲ್ಲಿ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ಲೋಕಾಯುಕ್ತಕ್ಕೆ ನಿರ್ಬಂಧಿಸಿರುವ ಮಧ್ಯಂತರ ಆದೇಶವು ತೆರವಾಗಲಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 24ಕ್ಕೆ ಮುಂದೂಡಿತು.

Kannada Bar & Bench
kannada.barandbench.com