[ಸಚಿವ ಸೋಮಣ್ಣ ಅಕ್ರಮ ಆಸ್ತಿ ಪ್ರಕರಣ] ಏಪ್ರಿಲ್‌ 1ಕ್ಕೆ ನಿರೀಕ್ಷಣಾ ಜಾಮೀನು ಮನವಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

“ನ್ಯಾಯಾಲಯವು ಆರೋಪಿ ಸೋಮಣ್ಣ ಅವರಿಗೆ ಜಾಮೀನು ರಹಿತ ಸಮನ್ಸ್‌ ಜಾರಿ ಮಾಡಿಲ್ಲ. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ಆಕ್ಷೇಪಿಸಿದ ವಕೀಲ ಬಿ ಎನ್‌ ಜಗದೀಶ್‌.
Housing Minister V Somanna and City Civil court 
Housing Minister V Somanna and City Civil court 
Published on

ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ವಸತಿ ಸಚಿವ ವಿ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಗೆ ಸಂಬಂಧಿಸಿದ ಆದೇಶವನ್ನು ಏಪ್ರಿಲ್‌ 1ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಯ್ದಿರಿಸಿದೆ.

ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಬುಧವಾರ ನಡೆಸಿದ 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ಪಕ್ಷಕಾರರ ವಾದ ಆಲಿಸಿ ಆದೇಶ ಕಾಯ್ದಿರಿಸಿದರು.

ದೂರುದಾರ ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರನ್ನು ಪ್ರತಿನಿಧಿಸಿದ್ದ ವಕೀಲ ಬಿ ಎನ್‌ ಜಗದೀಶ್‌ ಅವರು “ನ್ಯಾಯಾಲಯವು ಆರೋಪಿ ಸೋಮಣ್ಣ ಅವರಿಗೆ ಜಾಮೀನು ರಹಿತ ಸಮನ್ಸ್‌ ಜಾರಿ ಮಾಡಿಲ್ಲ. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ಆಕ್ಷೇಪಿಸಿದರು.

ಸೋಮಣ್ಣ ಅವರ ಪರ ವಕೀಲರು “ಸಮನ್ಸ್‌ ಜಾರಿ ಮಾಡಿದ್ದರೂ ಮನವಿಯು ನಿರ್ವಹಣೆಗೆ ಅರ್ಹವಾಗಿದೆ. ಈ ಸಂಬಂಧ ಹೈಕೋರ್ಟ್‌ ತೀರ್ಪು ಇದೆ” ಎಂದು ಸಮರ್ಥಿಸಿದರು.

ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮಹತ್ವದ ಆದೇಶ ಮಾಡಿತ್ತು. ಅಲ್ಲದೇ, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮಣ್ಣ ನಿರೀಕ್ಷಣಾ ಜಾಮೀನು ಕೋರಿದ್ದಾರೆ.

Also Read
[ಸಚಿವ ಸೋಮಣ್ಣ ಅಕ್ರಮ ಆಸ್ತಿ ಪ್ರಕರಣ] ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಿಗೆ ಸೂಚಿಸಿದ ನ್ಯಾಯಾಲಯ

ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಲ್ಲಿ ಮಾರಾಟ ಸಹಾಯಕನಾಗಿ ಕೆಲಸಕ್ಕೆ ಸೇರಿದಾಗ ಸೋಮಣ್ಣ ಅವರ ಮಾಸಿಕ ಸಂಬಳವು 231 ರೂಪಾಯಿಗಳಾಗಿತ್ತು. ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು ₹15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ₹71,437 ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ₹18,49,89,441 ಆಗಿದೆ. ಸುಮಾರು ₹12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

Kannada Bar & Bench
kannada.barandbench.com