“ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ದೃಢವಾಗಿ ಉಲ್ಲೇಖಿಸಿ, ಸಾಬೀತುಪಡಿಸಬೇಕು. ಇಡೀ ಜಗತ್ತು ತನ್ನ ವಿರುದ್ಧವಾಗಿದೆ ಎಂದು ಅವರು ಹೇಳಲಾಗದು” ಎಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಾದವನ್ನು ಸಿಬಿಐ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ತಿರಸ್ಕರಿಸಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ವಿರುದ್ಧದ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್ ವಜಾ ಮಾಡುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ಮುಂದುವರಿಸಿತು.
ಈ ವೇಳೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರತಿನಿಧಿಸಿದ್ದ ವಕೀಲರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂಬ ಅವರ ವಕೀಲರ ವಾದಕ್ಕೆ ಬಲವಾಗಿ ತಿರುಗೇಟು ನೀಡಿದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರು ಡಿ ಕೆ ಶಿವಕುಮಾರ್ ಪರ ವಾದಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರ ಆಕ್ಷೇಪಗಳಿಗೆ ತೀಕ್ಷ್ಣವಾಗಿ ಉತ್ತರಿಸಿದರು.
“ರಾಜಕೀಯ ದುರುದ್ದೇಶ ಎಂಬುದು ಸಾಮಾನ್ಯ ಆರೋಪಕ್ಕೆ ಸೀಮಿತವಾಗಬಾರದು. ಅದನ್ನು ದೃಢವಾಗಿ ಉಲ್ಲೇಖಿಸಿ, ಸಾಬೀತುಪಡಿಸಬೇಕು. ಯಾರ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಅವರ ಹೆಸರು ಉಲ್ಲೇಖಿಸಬೇಕು. ಅರ್ಜಿಯಲ್ಲಿ ಯಾರೊಬ್ಬರನ್ನೂ ಪಕ್ಷಕಾರರನ್ನಾಗಿ ಮಾಡಲಾಗಿಲ್ಲ. ರಾಜಕೀಯ ದುರುದ್ದೇಶ ಹೊಂದಲಾಗಿದೆ ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಯಾರ ಸೂಚನೆಯ ಮೇರೆಗೆ ಎಂಬುದನ್ನು ಉಲ್ಲೇಖಿಸಬೇಕು. ಅದು ಬಿಟ್ಟು ಇಡೀ ಪ್ರಪಂಚ ನನ್ನ ವಿರುದ್ಧ ಇದೆ ಎಂದು ಸಾಮಾನ್ಯ ಹೇಳಿಕೆ ನೀಡಲಾಗದು” ಎಂದು ಆಕ್ಷೇಪಿಸಿದರು.
“ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್ 13(1)(ಇ) ಸಾರ್ವಜನಿಕ ವ್ಯಕ್ತಿ, ಕುಟುಂಬ ಸದಸ್ಯರು ಮಾತ್ರವಲ್ಲದೇ ಬೇರೆ ಯಾರೇ ಅವರಿಗೆ ಸಂಬಂಧಿಸಿದವರಿಗೂ ಅನ್ವಯಿಸಬಹುದು. ಇಲ್ಲಿ ಮೂರನೇ ವ್ಯಕ್ತಿಯೂ ಆಗಿರಬಹುದು ಎಂದು ಹೇಳಲಾಗಿದೆ. ಆರೋಪಿ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕುಟುಂಬ ಎಂದರೆ ಪತ್ನಿ, ಅವರನ್ನು ಆಧರಿಸಿರುವ ಕುಟುಂಬ ಎಂದರೆ ಸ್ವತಂತ್ರ ಆದಾಯ ಇಲ್ಲದ ಮಕ್ಕಳಾಗಿರುತ್ತಾರೆ” ಎಂದು ವಿವರಿಸಿದರು.
ವಾದದ ಒಂದು ಹಂತದಲ್ಲಿ ಪ್ರಸನ್ನಕುಮಾರ್ ಅವರು “ಡಿ ಕೆ ಶಿವಕುಮಾರ್ ಅವರು 74.93 ಕೋಟಿ ಮೌಲ್ಯದ ಅಂದರೆ ಶೇ. 44.93ರಷ್ಟು ಆದಾಯ ಮೀರಿದ ಆಸ್ತಿ ಹೊಂದಿದ್ದಾರೆ” ಎಂದು ಅಂಕಿ-ಸಂಖ್ಯೆಗಳ ಸಮೇತ ಪೀಠಕ್ಕೆ ವಿವರಿಸಿದರು.
“ದುರುದ್ದೇಶಪೂರಿತವಾದ ಪ್ರಕರಣದ ಭಾಗವಾಗಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಯನ್ನು ತನಿಖೆಯ ಸುಳಿಗೆ ಸಿಲುಕಿಸಿ ಅವರಿಗೆ ಮಾನಸಿಕ ಮತ್ತು ಭಾವನಾತ್ಮಕ ವೇದನೆ ಹಾಗೂ ಸಾಮಾಜಿಕ ವಿಡಂಬನೆ ಉಂಟು ಮಾಡುವಂತಹ ಪ್ರಕರಣಗಳಿರುತ್ತವೆ. ತನಿಖಾ ಪ್ರಕ್ರಿಯೆಯಲ್ಲಿ ಅದೆಲ್ಲವನ್ನೂ ಅನುಭವಿಸಬೇಕಾಗುತ್ತದೆ. ಕಾನೂನಿನ್ವಯ ಸಮಾಜ ನಡೆಯಬೇಕಾದರೆ ಇಂಥ ಸಣ್ಣ ಪ್ರಮಾಣದ ದಂಡ ತೆರಬೇಕಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಪ್ರಸನ್ನಕುಮಾರ್ ಅವರು ಉಲ್ಲೇಖಿಸುವ ಮೂಲಕ ಶಿವಕುಮಾರ್ ಅವರಿಗೆ ಮಾನಸಿಕ ವೇದನೆ ನೀಡಲಾಗಿದೆ ಎಂಬುದಕ್ಕೆ ಉತ್ತರಿಸುವ ಪ್ರಯತ್ನ ಮಾಡಿದರು. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ.