ಡಿಕೆಶಿಗೆ ಸದ್ಯಕ್ಕಿಲ್ಲ ಆತಂಕ; ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಆದೇಶ ಪರಿಗಣಿಸಿ ಮನವಿ ಇತ್ಯರ್ಥ

ಇಲ್ಲಿಯವರೆಗೆ ಸಿಬಿಐ ತನಿಖೆಗೆ ಅನುಮೋದನೆ ನೀಡಿರುವುದನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಲಾಗಿಲ್ಲ. ಹೀಗಾಗಿ, ಸಿಬಿಐ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ವಾದ ಪರಿಗಣಿಸಲಾಗದು ಎಂದಿರುವ ಹೈಕೋರ್ಟ್.
ಡಿಕೆಶಿಗೆ ಸದ್ಯಕ್ಕಿಲ್ಲ ಆತಂಕ; ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಆದೇಶ ಪರಿಗಣಿಸಿ ಮನವಿ ಇತ್ಯರ್ಥ

ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನೀಡಿದ್ದ ಅನುಮೋದನೆ ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ ಮೇಲ್ಮನವಿಯನ್ನು ಬುಧವಾರ ಇತ್ಯರ್ಥಪಡಿಸಿದೆ. ಹೀಗಾಗಿ, ಸದ್ಯಕ್ಕೆ ಡಿ ಕೆ ಶಿವಕುಮಾರ್‌ ಅವರು ಸಿಬಿಐ ಕುಣಿಕೆಯಿಂದ ಪಾರಾಗಿದ್ದಾರೆ.

ಸಿಬಿಐ ತನಿಖೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಬೇಕು ಹಾಗೂ ಸಿಬಿಐ ತನಿಖೆಗೆ ಅನುಮೋದಿಸಿರುವ ರಾಜ್ಯ ಸರ್ಕಾರದ ಆದೇಶ ವಜಾ ಮಾಡಬೇಕು ಎಂದು ಕೋರಿ ಡಿ ಕೆ ಶಿವಕುಮಾರ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ನಮ್ಮ ಅಭಿಪ್ರಾಯದ ಪ್ರಕಾರ ಇಲ್ಲಿಯವರೆಗೆ ಸಿಬಿಐ ತನಿಖೆಗೆ ಅನುಮೋದನೆ ನೀಡಿರುವುದನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಬಗ್ಗೆ ಪ್ರಶ್ನಿಸಲಾಗಿಲ್ಲ. ಹೀಗಾಗಿ, ಸಿಬಿಐ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ (ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಿದ್ದರು) ವಾದವನ್ನು ಪರಿಗಣಿಸಲಾಗದು. ಮೇಲ್ಮನವಿದಾರರು ರಿಟ್‌ ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯಲು ಅನುಮತಿ ಕೋರಿರುವುದಕ್ಕೆ ಸಮ್ಮತಿಸಿದ್ದು, ಅರ್ಜಿ ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಇದಕ್ಕೂ ಮುನ್ನ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ಜೊತೆಗೆ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಶಿವಕುಮಾರ್‌ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ. ಡಿಎಸ್‌ಪಿಇ ಕಾಯಿದೆಯ ಸೆಕ್ಷನ್‌ 6 ಸ್ಪಷ್ಟವಾಗಿದೆ. ಸಿಬಿಐ ತನಿಖೆ ಮುಂದುವರಿಸಲು ಬಯಸುವುದು ಬೇರೆ ವಿಚಾರ. ಒಮ್ಮೆ ಅನುಮೋದನೆ ಹಿಂಪಡೆದರೆ ತನಿಖೆ ಮುಂದುವರಿಸಲು ಅವರಿಗೆ ಅವಕಾಶವಿಲ್ಲ” ಎಂದು ಪೀಠಕ್ಕೆ ಮೌಖಿಕವಾಗಿ ವಿವರಿಸಿದರು.

“ರಾಜ್ಯ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರವನ್ನು ಆದೇಶದಲ್ಲಿ ತಿಳಿಸಲಾಗಿದೆ. ಸಿಬಿಐ ಮತ್ತು ಮಧ್ಯಪ್ರವೇಶಿಕೆ ಅರ್ಜಿದಾರರು ಆಧರಿಸಿರುವ ಖಾಜಿ ದೋರ್ಜಿ ವರ್ಸಸ್‌ ಸಿಬಿಐ ಪ್ರಕರಣವು ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ” ಎಂದರು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ರಿಟ್‌ ಅರ್ಜಿ ಮತ್ತು ರಿಟ್‌ ಮೇಲ್ಮನವಿ ಹಿಂಪಡೆಯುವುದಾಗಿ ಮೇಲ್ಮನವಿದಾರರ ಪರ ವಕೀಲರು ಹೇಳಿದ್ದಾರೆ. ರಿಟ್‌ ಅರ್ಜಿ ಹಿಂಪಡೆಯುವುದಕ್ಕೆ ನಮ್ಮ ಆಕ್ಷೇಪವಿದೆ. ಮೇಲ್ಮನವಿ ಹಿಂಪಡೆಯುವುದಕ್ಕೆ ಆಕ್ಷೇಪವಿಲ್ಲ. ಎಫ್‌ಐಆರ್‌ ಅನ್ನು ಸರ್ಕಾರ ಹಿಂಪಡೆಯಲಾಗದು. ನ್ಯಾಯಾಲಯ ಮಾತ್ರ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಎಫ್‌ಐಆರ್‌ ವಜಾ ಮಾಡಬಹುದು” ಎಂದರು.

“2019ರ ಸೆಪ್ಟೆಂಬರ್‌ 25ರಂದು ಸಿಬಿಐಗೆ ನೀಡಿರುವ ಅನುಮೋದನೆಯ ಭಾಗವಾಗಿ ಎಫ್‌ಐಆರ್‌ ದಾಖಲಿಸಿ, ಪ್ರಕ್ರಿಯೆ ನಡೆಸಲಾಗುತ್ತಿದೆ. ಭಾಗಶಃ ತನಿಖೆಯು ನಡೆದಿದೆ. 1994ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧರಿಸಿದ್ದು, ರಾಜ್ಯ ಸರ್ಕಾರ ಅನುಮತಿ ಹಿಂಪಡೆಯಬಾರದು. ಇದನ್ನು ಒಪ್ಪಲಾಗದು, ಅದು ಊರ್ಜಿತವಾಗುವುದಿಲ್ಲ” ಎಂದು ವಾದಿಸಿದರು.

Also Read
ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆತ: ನ್ಯಾಯಾಲಯದಲ್ಲಿ ಪ್ರಕರಣ ಈವರೆಗೆ ಸಾಗಿ ಬಂದ ಹಾದಿಯ ಮಾಹಿತಿ

ಇದಕ್ಕೆ ಪೀಠವು “ನೀವು (ಸಿಬಿಐ) ಎಫ್‌ಐಆರ್‌ ವಿಚಾರದಲ್ಲಿ ಮುಂದುವರಿಯಬಹುದು. ಕಾನೂನಿನಲ್ಲಿ ಅನುಮತಿ ಇದ್ದರೆ ನೀವು ಮುಂದುವರಿಯಬಹುದು. ನಿಮ್ಮ ಎಫ್‌ಐಆರ್‌ ವಿಚಾರವನ್ನು ಮೈಲಿ ದೂರದಲ್ಲಿಟ್ಟಿದ್ದೇವೆ” ಎಂದಿತು.

ಮೇಲ್ಮನವಿದಾರ ಡಿಕೆಶಿ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಡಾ. ಅಭಿಷೇಕ್‌ ಮನು ಸಿಂಘ್ವಿ ಮತ್ತು ಉದಯ್‌ ಹೊಳ್ಳ ಅವರು “ರಾಜ್ಯ ಸರ್ಕಾರವು ನವೆಂಬರ್‌ 28ರಂದು ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆದು ಆದೇಶ ಮಾಡಿದೆ. ಹೀಗಾಗಿ, ರಿಟ್‌ ಅರ್ಜಿಯು ಅಮಾನ್ಯಗೊಂಡಿದೆ. ಈ ನೆಲೆಯಲ್ಲಿ ರಿಟ್‌ ಅರ್ಜಿ ಮತ್ತು ರಿಟ್‌ ಮೇಲ್ಮನವಿ ಹಿಂಪಡೆಯಲು ಅನುಮತಿಸಬೇಕು” ಎಂದು ಕೋರಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

Kannada Bar & Bench
kannada.barandbench.com