ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮತ್ತೆರಡು ವಾರ ವಿಸ್ತರಿಸಿದೆ.
ಸಿಬಿಐ ತನಿಖೆ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರು, ನ್ಯಾಯಾಲಯದ ನಿರ್ದೇಶನದಂತೆ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸಲಾಗಿದೆ. ಪ್ರಕರಣದಲ್ಲಿ ಏನೆಲ್ಲ ತನಿಖೆ ನಡೆಸಲಾಗಿದೆ ಎಂಬ ಬಗ್ಗೆ ಹಲವು ಮಹತ್ವದ ಮಾಹಿತಿಗಳು ವರದಿಯಲ್ಲಿದೆ. ಅದರ ಆಧಾರದಲ್ಲಿ ತನಿಖೆ ಪೂರ್ಣಗೊಳಿಸಬೇಕಿದೆ. ಆದರೆ, ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಛತ್ತೀಸ್‌ಗಢ ಸರ್ಕಾರ ಮತ್ತು ಅಮನ್‌ಕುಮಾರ್ ಸಿಂಗ್ ನಡುವಿನ ಪ್ರಕರಣದಲ್ಲಿ ಎರಡು ದಿನಗಳ ಹಿಂದಷ್ಟೇ (ಮಾರ್ಚ್ 1) ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸಮಾನ ಸ್ವತ್ತು ಹಂಚಿಕೆ ಸಾಧಿಸುವ ಮೂಲಕ ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವುದು ಸಂವಿಧಾನದ ಆಶಯವಾಗಿದೆ. ಆದರೆ, ಈ ಉದ್ದೇಶವಿನ್ನೂ ದೂರದ ಕನಸಾಗಿ ಉಳಿದಿದ್ದು, ನಿಸ್ಸಂದೇಹವಾಗಿ ಭ್ರಷ್ಟಾಚಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ, ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ತನಿಖೆಗೆ ವಿಧಿಸಿರುವ ಮಧ್ಯಂತರ ತಡೆ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು.
ಅರ್ಜಿದಾರರ ಮಗಳಿಗೂ ನೋಟಿಸ್ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತನಿಖೆಗೆ ತಡೆಯಾಜ್ಞೆ ಪಡೆದುಕೊಳ್ಳಲಾಗಿದೆ. ಆದರೆ, ಅರ್ಜಿದಾರರಿಗಾಗಲೀ ಅವರ ಮಗಳಿಗಾಗಲೀ ಯಾವುದೇ ನೋಟಿಸ್ ನೀಡಿಲ್ಲ. ಅರ್ಜಿದಾರರ ಮಗಳು ಓದಿದ್ದ ಶಾಲೆ ಮತ್ತು ಕಾಲೇಜುಗಳಿಗಷ್ಟೇ ನೋಟಿಸ್ ನೀಡಲಾಗಿದ್ದು, ಅವರ ಶುಲ್ಕ ಯಾರು ಪಾವತಿಸಿದ್ದಾರೆ, ಎಷ್ಟು ಪಾವತಿಸಿದ್ದಾರೆ ಎಂಬ ಮಾಹಿತಿ ಕೇಳಲಾಗಿದೆ. ಹೀಗಿದ್ದರೂ, ಸುಳ್ಳು ಹೇಳಿ ನ್ಯಾಯಾಲಯದಿಂದ ತಡೆ ಆದೇಶ ಪಡೆಯಲಾಗಿದೆ ಎಂದು ಪ್ರಸನ್ನಕುಮಾರ್ ದೂರಿದರು.
ಸಿಬಿಐ ವಾದಕ್ಕೆ ಪ್ರತಿವಾದ ಮಂಡಿಸಲು ಡಿ ಕೆ ಶಿವಕುಮಾರ್ ಪರ ವಕೀಲರು ಕಾಲಾವಕಾಶ ಕೋರಿದರು. ಅದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತಲ್ಲದೆ, ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದ್ದ ತನಿಖಾ ಪ್ರಗತಿ ವರದಿಯನ್ನು ಸಿಬಿಐ ಪರ ವಕೀಲರಿಗೇ ಹಿಂದಿರುಗಿಸಿತು.