ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವಾದ ಮಂಡನೆ ವಿಚಾರದ ಕುರಿತು ನ್ಯಾಯಮೂರ್ತಿಗಳು ಮತ್ತು ಸಿಬಿಐ ವಕೀಲರ ನಡುವೆ ಬಿರುಸಿನ ವಾಗ್ವಾದ ನಡೆಯಿತು.
ರಾಜ್ಯ ಅಭಿಯೋಜಕರ ಕೋರಿಕೆಯ ಮೇರೆಗೆ ಪ್ರಕರಣವನ್ನು ನಿಗದಿತ ಕ್ರಮಕ್ಕೆ ಬದಲಾಗಿ ಮುಂಚಿತವಾಗಿ ಆಲಿಸಲು ನ್ಯಾಯಮೂರ್ತಿ ಕೆ ನಟರಾಜನ್ ಅವರು ಮುಂದಾದರು. ಈ ಸಂದರ್ಭದಲ್ಲಿ ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ಮತ್ತೊಂದು ಪೀಠದಲ್ಲಿ ವಾದ ಮಂಡನೆ ಮಾಡುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ಅವರು ವಾದ ಮಂಡಿಸುತ್ತಿರುವುದರಿಂದ ಅವರು ವಾದಿಸಲು ಕಾಲಾವಕಾಶ ನೀಡಬೇಕು ಎಂದು ಅವರ ಸಹೋದ್ಯೋಗಿ ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಒಪ್ಪಿದ ನ್ಯಾಯಾಲಯವು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸಿಬಿಐ ವಕೀಲರಾದ ಪ್ರಸನ್ನಕುಮಾರ್ ಅವರು ವಾದ ಮಂಡನೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ, ಕಾಲಾವಕಾಶ ನೀಡೋಣ ಎಂದು ಹೇಳಿತು. ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ವಿಚಾರಣೆಗೆ ಪ್ರಕರಣವನ್ನು ಕೈಗೆತ್ತಿಕೊಂಡಾಗಲು ಪ್ರಸನ್ನಕುಮಾರ್ ಅವರು ಬೇರೊಂದು ಪ್ರಕರಣದ ವಿಚಾರಣೆಯಲ್ಲಿ ಸಿಲುಕಿಕೊಂಡಿದ್ದರು. ಈ ಮಧ್ಯೆ, ರಾಜ್ಯ ಸರ್ಕಾರ ಮತ್ತು ಡಿ ಕೆ ಶಿವಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರ ವಾದವನ್ನು ಆಲಿಸಿದ್ದ ಪೀಠವು ಪ್ರಕರಣದ ಆದೇಶ ಕಾಯ್ದಿರಿಸಲಾಗಿದೆ ಎಂದು ಆದೇಶಿಸಿತು.
ಈ ವಿಚಾರ ಗೊತ್ತಾಗಿ, ಬೇರೆ ಕೋರ್ಟ್‌ನಲ್ಲಿ ಕೆಲಕಾಲ ಅನುಮತಿ ಪಡೆದು ನ್ಯಾ. ನಟರಾಜನ್ ಅವರ ಮುಂದೆ ಹಾಜರಾದ ಪ್ರಸನ್ನಕುಮಾರ್ ಅವರು ಸಿಬಿಐ ಪರವಾಗಿ ವಾದಿಸಲು ಅವಕಾಶ ನೀಡಬೇಕು. ತಾವು ಆದೇಶ ಕಾಯ್ದಿರಿಸಿರುವ ವಿಚಾರಗೊತ್ತಾಗಿದೆ. ಮತ್ತೊಂದು ಕೋರ್ಟ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಸಿಲುಕಿದ್ದರಿಂದ ತಮ್ಮ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಪರಿಸ್ಥಿತಿ ವಿವರಿಸಿದರು.
ಇದರಿಂದ ಕೆರಳಿದ ನ್ಯಾ. ನಟರಾಜನ್ ಅವರು ಈಗ ಸಮಯ 4.45 ಆಗಿದೆ. ಈಗ ವಾದ ಮಂಡನೆಗೆ ಕಾಲಾವಕಾಶ ಕೇಳುತ್ತಿದ್ದೀರಲ್ಲಾ? ನಿಮಗೆ ಬೇಕೆಂದಾಗ ಬಂದು ವಾದ ಮಾಡುತ್ತೇನೆ ಎನ್ನಲು ಇದನ್ನು ಏನೆಂದುಕೊಂಡಿದ್ದೀರಿ ಎಂದು ಏರುಧ್ವನಿಯಲ್ಲಿ ಹೇಳಿದರು. ಇದರಿಂದ ಕುಪಿತರಾದ ಪ್ರಸನ್ನಕುಮಾರ್ ಅವರು ಬೇರೊಂದು ಪ್ರಕರಣದಲ್ಲಿ ವಾದ ಮಂಡನೆ ಇದ್ದುದ್ದರಿಂದ ತಮ್ಮ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ. ನನ್ನ ವಾದವನ್ನು ನೀವು ಆಲಿಸಲೇಬೇಕು ಎಂದು ಆಗ್ರಹಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು ನೀವು ಹೇಳಬೇಕೆಂದುಕೊಂಡಿರುವುದನ್ನು ಲಿಖಿತವಾಗಿ ಸಲ್ಲಿಸಿ ಎಂದರು. ಇದಕ್ಕೆ ಪ್ರಸನ್ನಕುಮಾರ್ ಅವರು ವಾದ ಆಲಿಸಲು ತಾವು ಸಿದ್ಧವಿಲ್ಲ ಎಂಬ ವಿಚಾರವನ್ನು ನೀವು ಆದೇಶದಲ್ಲಿ ದಾಖಲಿಸಬೇಕು ಎಂದು ಪಟ್ಟುಹಿಡಿದರು. ಅಂತಿಮವಾಗಿ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ವಿಸ್ತರಿಸಿ, ಸಿಬಿಐ ವಕೀಲರ ವಾದ ಆಲಿಸಲು ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿದರು.