ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿರುವ ಮೇಲ್ಮನವಿ ವಿಚಾರಣೆಯನ್ನು ಉಭಯ ಪಕ್ಷಕಾರರು ಜಂಟಿ ಮೆಮೊ ಹಾಕಿ ಮುಂದೂಡಿಕೆ ಕೋರಿದ ಹಿನ್ನೆಲೆಯಲ್ಲಿ ನವೆಂಬರ್ 29ಕ್ಕೆ ಕರ್ನಾಟಕ ಹೈಕೋರ್ಟ್ ವಿಚಾರಣೆ ನಿಗದಿಪಡಿಸಿದೆ.
ಸಿಬಿಐ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಮೇಲ್ಮನವಿದಾರರು ಇಂದು ವಾದ ಮಂಡನೆ ಮಾಡಲಿ. ಸಿಬಿಐ ಪರವಾಗಿ ನವೆಂಬರ್ 27ಕ್ಕೆ ವಾದಿಸಲಾಗುವುದು. ಇಂದು ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಬೇರೆ ಪ್ರಕರಣದ ವಿಚಾರಣೆಗೆ ಇರುವುದು ಮುಂದೂಡಿಕೆ ಕೋರಿಕೆಯನ್ನು ಪರಿಗಣಿಸುವಂತೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕೋರಿದರು.
ಆಗ ಸಿಜೆ ಅವರು ನವೆಂಬರ್ 27ಕ್ಕೆ ವಿಚಾರಣೆ ಇರುವುದಿಲ್ಲ ಎಂದರು. “ಮೇಲ್ಮನವಿದಾರರು ಮಧ್ಯಾಹ್ನ ವಾದ ಮಂಡಿಸಲಿ, ಅವರ ವಾದದ ಬಳಿಕ ನಿಮಗೆ ದಿನಾಂಕ ನೀಡಲಾಗುವುದು” ಎಂದು ಎಎಸ್‌ಜಿಗೆ ತಿಳಿಸಿದರು.
ಆದರೆ, ಬೇರೊಂದು ಪ್ರಕರಣದ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಡಿ ಕೆ ಶಿವಕುಮಾರ್ ಅವರ ಪರವಾಗಿ ವಾದಿಸಲು ನಮಗೆ ಅರ್ಧ ತಾಸು ಸಾಕು. ಇಂದು ವಿಚಾರಣೆ ಮುಂದೂಡಬಹುದು” ಎಂದರು.
ಆಗ ಪೀಠವು “ಉಭಯ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿ, ವಿಚಾರಣೆ ಮುಂದೂಡಿಕೆ ಕೋರಿದರೆ ಪರಿಗಣಿಸಲಾಗುವುದು” ಎಂದಿತು. ಈ ಹಿನ್ನೆಲೆಯಲ್ಲಿ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿದ್ದು, ಅದನ್ನು ಪರಿಗಣಿಸಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು.
ಸರ್ವೋಚ್ಚ ನ್ಯಾಯಾಲಯವು ನವೆಂಬರ್ 11ರಂದು ತನ್ನ ಆದೇಶದಲ್ಲಿ ಶಿವಕುಮಾರ್ ಅವರ ಪರವಾಗಿ ನೀಡಿರುವ ತಡೆಯಾಜ್ಞೆ ತೆರವು ಮಾಡುವಂತೆ ಸಿಬಿಐ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ ಎನ್ನುವ ಅಂಶವನ್ನು ಗಮನಿಸಿತ್ತು. ಹೀಗಾಗಿ, ಮಧ್ಯಂತರ ಆದೇಶ ತೆರವು ಮಾಡುವಂತೆ ಸಿಬಿಐ ಕೋರಿರುವ ಅರ್ಜಿ ಹಾಗೂ ಮೇಲ್ಮನವಿಯನ್ನು ತುರ್ತಾಗಿ ಅಂದರೆ ಎರಡು ವಾರದಲ್ಲಿ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.