
ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಪ್ರಶ್ನಿಸಲಾದ ಅರ್ಜಿಯ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಪ್ರಾಸಿಕ್ಯೂಷನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸಿಬಿಐ ತನಿಖೆಗೆ ಅನುಮತಿ ನೀಡಲಾದ ಅಧಿಸೂಚನೆ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಪ್ರಾಸಿಕ್ಯೂಷನ್ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿ ಎಸ್ ಹೆಗಡೆ ಅವರು “ಅರ್ಜಿಯ ತಿದ್ದುಪಡಿ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ. ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಅಧಿಕಾರಿಗಳು ಕಾರ್ಯೋದ್ಯುಕ್ತರಾಗಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ಕಾನೂನಾತ್ಮಕ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ. ಅಡ್ವೊಕೇಟ್ ಜನರಲ್ ಅವರಿಂದಲೂ ವಿವರಣೆ ಪಡೆಯಬೇಕಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ಸಮಯ ನೀಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.
ಇದನ್ನು ಒಪ್ಪದ ಪೀಠವು, "ಅರ್ಜಿಯ ಪ್ರಗತಿಗಾಗಿ ಕೋರ್ಟ್ ಶ್ರಮಿಸಬೇಕಾಗಿದೆಯಲ್ಲಾ, ಬೇರೊಂದು ಪೀಠದಲ್ಲಿದ್ದ ಈ ಅರ್ಜಿಯನ್ನು ಇಲ್ಲೇ ವಿಚಾರಣೆ ನಡೆಸುವಂತೆ ಶಿವಕುಮಾರ್ ಪರ ವಕೀಲರು ಕೋರಿದ ಹಿನ್ನೆಲೆಯಲ್ಲಿ ಇಲ್ಲಿಗೆ ತರಿಸಿಕೊಳ್ಳಲಾಗಿದೆ. ಆದರೆ, ಮತ್ತೊಂದು ಪೀಠದಲ್ಲಿದ್ದಾಗ ರಾಜ್ಯ ಪ್ರಾಸಿಕ್ಯೂಷನ್ ಏಕೆ ಸುಮ್ಮನಿತ್ತು? ಸಿಬಿಐ ಬೇಗ ಬೇಗ ವಿಚಾರಣೆ ನಡೆಸುವಂತೆ ಕೋರುತ್ತಿದೆ. ನೀವು ನೋಡಿದರೆ ಕಾಲ ತಳ್ಳುತ್ತಿದ್ದೀರಿ. ನಿಮಗೆ ಯಾಕೆ ಸಮಯ ಕೊಡಬೇಕು?" ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರನ್ನು "ಹೊಳ್ಳ ಅವರೇ ನೀವೇಕೆ ಸುಮ್ಮನಿದ್ದಿರಿ?" ಎಂದು ಕೆಣಕಿತು. ಇದಕ್ಕೆ ಹೊಳ್ಳ ಅವರು, "ಸ್ವಾಮಿ ರಾಜ್ಯ ಪ್ರಾಸಿಕ್ಯೂಷನ್, ಪ್ರತಿಬಾರಿಯೂ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು ಎಂದು ಇಷ್ಟು ದಿನಗಳ ಕಾಲ ನೂಕುತ್ತಲೇ ಬಂದಿದೆ" ಎಂದರು.
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಶಿವಕುಮಾರ್ ಪರ ಹಿರಿಯ ವಕೀಲ ಸಿ ಎಚ್ ಜಾಧವ್ ಅವರ ಕೋರಿಕೆಯ ಮೇರೆಗೆ ಮುಂದಿನ ವಿಚಾರಣೆವರೆಗೂ ವಿಸ್ತರಿಸಿತು. ಸಿಬಿಐ ಪರ ಪಿ.ಪ್ರಸನ್ನಕುಮಾರ್ ಹಾಜರಿದ್ದರು. ಉಭಯ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 6ಕ್ಕೆ ಮುಂದೂಡಿತು.