“ಕೇವಲ ಪುಟಗಳನ್ನು ತುಂಬಿಸುವ ಸಲುವಾಗಿ ಉದ್ದುದ್ದದ ಆದೇಶಗಳನ್ನು ಬರೆಸುವುದು ಸಲ್ಲ” ಎಂದು ಮ್ಯಾಜಿಸ್ಟ್ರೇಟ್ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, “ಯಾವುದೇ ಆದೇಶಗಳನ್ನು ಬರೆಸುವ ಮೊದಲಿಗೆ ನಿಮ್ಮ ಮನಸ್ಸು ಮತ್ತು ಬುದ್ಧಿಗೆ ಅನುಗುಣವಾದ ಸಂತುಲತೆ ಸೃಷ್ಟಿಸಿಕೊಳ್ಳಿ. ಸುಮ್ಮನೆ ಕಾಗದದ ಮೇಲೆ ಮಸಿಯನ್ನು ವ್ಯರ್ಥವಾಗಿ ಹರಿಸುವ ಪ್ರಯತ್ನ ಮಾಡಬೇಡಿ” ಎಂದು ಚಾಟಿ ಬೀಸಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ತುರುವೇಕೆರೆಯ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಮತ್ತು ಜೆಡಿಎಸ್‌ನ ಸ್ಥಳೀಯ ಘಟಕದ ಮುಖ್ಯಸ್ಥ ಸ್ವಾಮಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಗೊಳಿಸಿದೆ.
“ಯಾವುದೇ ದೂರುಗಳ ಅಪರಾಧಿಕ ಸೆಕ್ಷನ್‌ಗಳನ್ನು ವಿಚಾರಣೆಗೆ ಪರಿಗಣಿಸುವಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಸಾಕಷ್ಟು ಆಸ್ಥೆ ವಹಿಸಬೇಕು. ಅನವಶ್ಯಕ ಆದೇಶಗಳನ್ನು ಹೊರಡಿಸಬಾರದು ಎಂದು ಹೈಕೋರ್ಟ್, ಮ್ಯಾಜಿಸ್ಟ್ರೇಟ್‌ಗಳಿಗೆ ಪದೇ ಪದೇ ನಿರ್ದೇಶಿಸುತ್ತಲೇ ಬಂದಿದೆ. ಆದರೂ, ಇದನ್ನು ಗಮನಿಸದೇ ಇರುವುದು ಸರಿಯಲ್ಲ” ಎಂದು ಪೀಠ ಅತೃಪ್ತಿ ಹೊರಹಾಕಿದೆ.
ಪ್ರಕರಣದ ಹಿನ್ನೆಲೆ: ಎಂ ಟಿ ಕೃಷ್ಣಪ್ಪ ಮತ್ತು ಸ್ವಾಮಿ ವಿರುದ್ಧ ತುರುವೇಕೆರೆ ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಎಚ್ ಎಸ್ ವಿಶ್ವನಾಥ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತುರುವೇಕೆರೆ ತಾಲ್ಲೂಕು ಕಚೇರಿ ಮುಂಭಾಗ, ನಗರದ ಎಲ್ಲಾ ವಾರ್ಡು ಮತ್ತು ಹೋಬಳಿಗಳಲ್ಲಿ ಮಸಾಲೆ ಜಯರಾಮ್ (ಅಂದಿನ ಸ್ಥಳೀಯ ಶಾಸಕ) ಅವರ ಮರ್ಯಾದೆ ಹಾಳು ಮಾಡುವಂತಹ ಬ್ಯಾನರ್‌ಗಳನ್ನು ಅಳವಡಿಸಿ, ಅವಹೇಳನಕಾರಿ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗಿದೆ. ಬ್ಯಾನರ್ ಮತ್ತು ಕರಪತ್ರಗಳಲ್ಲಿ ಮಸಾಲೆ ಜಯರಾಮ್ ವಿರುದ್ಧದ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಆದ್ದರಿಂದ, ಇದಕ್ಕೆ ಕಾರಣವಾಗಿರುವ ಕೃಷ್ಣಪ್ಪ ಮತ್ತು ಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ದೂರಿನಲ್ಲಿ ವಿವರಿಸಿದ್ದರು.
ಇದರನ್ವಯ ಸ್ಥಳೀಯ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 504 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತಾದ ದೂರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ವಿಚಾರಣೆಗೆ ಪರಿಗಣಿಸಿದ್ದರು. ಈ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೃಷ್ಣಪ್ಪ ಮತ್ತು ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.