ಲೈಂಗಿಕ ದೌರ್ಜನ್ಯದ ದೃಶ್ಯಗಳ ಪೆನ್ ಡ್ರೈವ್‌ ವಿತರಿಸಿರುವುದು ಪಾಪದ ಕೆಲಸ: ಹೈಕೋರ್ಟ್‌ ಮೌಖಿಕ ಬೇಸರ

ಹಾಸನದ ಸೈಬರ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 171­ಜಿ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67(ಎ) ಅಡಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಕೋರಿದ್ದ ಪ್ರಮುಖ ಆರೋಪಿ ಶರತ್‌.
sexual assault
sexual assault

“ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯ ಒಳಗೊಂಡ ಪೆನ್ ಡ್ರೈವ್‌ ವಿತರಿಸಿರುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ. ಇಂಥ ಕೆಲಸದಿಂದ ಪುರುಷ ಏನೂ ಕಳೆದುಕೊಳ್ಳುವುದಿಲ್ಲ. ಆದರೆ, ಮಹಿಳೆ ಅಪಮಾನಕ್ಕೆ ಒಳಗಾಗುತ್ತಾಳೆ” ಎಂದು ಮೌಖಿಕವಾಗಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಬೇಸರ ವ್ಯಕ್ತಪಡಿಸಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ಹಗರಣ ಸಂಬಂಧದ ಪೆನ್ ಡ್ರೈವ್ ವಿತರಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನದ ಶರತ್ ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯವು ಸದ್ಯಕ್ಕೆ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆರೋಪಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂದಿತು. ಅದಕ್ಕೆ ಆರೋಪಿ ಪರ ವಕೀಲ ಪವನ್‌ ಚಂದ್ರ ಶೆಟ್ಟಿ ಅವರು “ಹಾಗಿದ್ದರೆ ಬಂಧಿಸದಂತೆ ಆದೇಶ ಮಾಡಬೇಕು” ಎಂದು ಕೋರಿದರು.

ಆಗ ಪೀಠವು “ಈ ನ್ಯಾಯಾಲಯವನ್ನು ಜಾಮೀನು ಮಂಜೂರು ಮಾಡುವ ನ್ಯಾಯಾಲಯವನ್ನಾಗಿ ಪರಿಗಣಿಸಬಾರದು. ಮೊದಲು ನಿರೀಕ್ಷಣಾ ಅಥವಾ ಸಾಮಾನ್ಯ ಜಾಮೀನು ಪಡೆಯಿರಿ. ಇಲ್ಲವೇ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಅಲ್ಲಿಯವರೆಗೆ ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ” ಎಂದು ಅರ್ಜಿ ವಿಚಾರಣೆ ಮುಂದೂಡಿತು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ತನಿಖಾ ವರದಿಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಶರತ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಅರ್ಜಿದಾರರ ಪರ ವಕೀಲ ಪವನ್‌ ಅವರು “ಶರತ್ ಕುರಿತು ಕೇವಲ ಮಾಹಿತಿ ಇದೆ ಎಂದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗದು. ಆರೋಪಿ ವಿರುದ್ಧ ಕಳೆದ 30 ದಿನಗಳಿಂದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಪ್ರಕರಣ ರದ್ದು ಕೋರಲಾಗಿದೆ. ಈಗ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ಜಗದೀಶ್ ಅವರು “ಪೆನ್ ಡ್ರೈವ್‌ಗಳ ಕಾಪಿ ಮತ್ತು ವಿತರಣೆ ಪ್ರಕರಣದಲ್ಲಿ ಅರ್ಜಿದಾರ ಪ್ರಮುಖ ವ್ಯಕ್ತಿ. ಹೀಗಾಗಿ, ನ್ಯಾಯಾಲಯ ಯಾವುದೇ ಪರಿಹಾರ ನೀಡಬಾರದು” ಎಂದು ಕೋರಿದರು.

ಆಗ ಪವನ್‌ ಅವರು “ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಗುರಿ ಮಾಡಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಶರತ್‌ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ” ಎಂದರು.

ಇದಕ್ಕೆ ಪೀಠವು “ಏನಿದು ರಾಜಕೀಯ ದ್ವೇಷನಾ? ಇರಲಿ ಬಿಡಿ. ಯಾವುದೇ ವ್ಯಕ್ತಿ ಇಂತಹ ಕೆಲಸ ಮಾಡಿರಲಿ ಅದು ಮಹಾ ಪಾಪ. ಮಹಿಳೆಯನ್ನು ಯಾರೂ ಕೆಟ್ಟದಾಗಿ ಬಿಂಬಿಸಬಾರದು, ಅಂತಹ ಕೆಲಸ ಅಪಾಯಕಾರಿ. ನೀವು ಮಹಿಳೆಯನ್ನು ಕೆಟ್ಟದಾಗಿ ಚಿತ್ರಿಸಿದರೆ, ಅದು ಯಾವ ಸನ್ನಿವೇಶನದಲ್ಲಿ, ಹೇಗೆ ಆಯಿತು ಎಂಬುದು ನಿಮಗೆ ತಿಳಿದಿರುವುದಿಲ್ಲ. ಇದರಿಂದ ಪುರುಷ ಕಳೆದುಕೊಳ್ಳುವುದು ಏನೂ ಇಲ್ಲ, ಆದರೆ ಮಹಿಳೆ ಅಪಮಾನಕ್ಕೆ ಗುರಿಯಾಗಬೇಕಾಗುತ್ತಾಳೆ” ಎಂದಿತು.

ಪ್ರಕರಣದ ಹಿನ್ನೆಲೆ: ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಏಪ್ರಿಲ್‌ 23ರಂದು ಜೆಡಿಎಸ್‌-ಬಿಜೆಪಿ ಚುನಾವಣಾ ಏಜೆಂಟ್‌ ಎಂ ಜಿ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೆನ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶರತ್‌, ಬೇಲೂರಿನ ಕಾಂಗ್ರೆಸ್‌ ಕಾರ್ಯಕರ್ತ ಚೇತನ್‌, ನವೀನ್‌ ಗೌಡ ಅಲಿಯಾಸ್‌ ನವೀನ್‌ ಕುಮಾರ್‌ ಎನ್‌ ಆರ್‌, ಹೊಳೆನರಸೀಪುರ ತಾಲ್ಲೂಕಿನ ಕಾರ್ತಿಕ್‌ ಮತ್ತು ಪುಟ್ಟರಾಜು ವಿರುದ್ಧ ಐಪಿಸಿ ಸೆಕ್ಷನ್‌ 171­ಜಿ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com