ಪ್ರೇಕ್ಷಕಿಗೆ ಇಲಿ ಕಡಿತ: ₹67,000 ಪರಿಹಾರ ನೀಡುವಂತೆ ಚಿತ್ರಮಂದಿರಕ್ಕೆ ಅಸ್ಸಾಂನ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ

ದೆಹಲಿಯ ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಅವಲಂಬಿಸಿದ ನ್ಯಾಯಾಲಯ ಮಹಿಳೆಗೆ ರೇಬಿಸ್ ಲಸಿಕೆ ನೀಡಲಾಯಿತು ಎಂಬ ಅಂಶವನ್ನು ಗಮನಿಸಿತು.
Rats and Cinema Hall
Rats and Cinema Hall
Published on

ಐದು ವರ್ಷಗಳ ಹಿಂದೆ, 2018ರಲ್ಲಿ ಅಸ್ಸಾಂನ ಚಿತ್ರಮಂದಿರವೊಂದರಲ್ಲಿ ಚಲನಚಿತ್ರ ಪ್ರದರ್ಶನದ ವೇಳೆ ಇಲಿ ಕಚ್ಚಿ ಗಾಯಗೊಂಡಿದ್ದ ಪ್ರೇಕ್ಷಕಿಗೆ ₹67,282 ಪರಿಹಾರ ನೀಡುವಂತೆ ಅಸ್ಸಾಂನ ಗ್ರಾಹಕ ನ್ಯಾಯಾಲಯ ಇತ್ತೀಚೆಗೆ ಚಿತ್ರಮಂದಿರದ ಮಾಲೀಕರಿಗೆ ಆದೇಶಿಸಿದೆ.

ದೆಹಲಿಯ ಉಪಹಾರ್‌ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ನ್ಯಾಯಾಲಯ ಅವಲಂಬಿಸಿತು. ಘಟನೆಯಿಂದಾಗಿ ಮಹಿಳೆಗೆ ರೇಬಿಸ್‌ ಲಸಿಕೆ ನೀಡಲಾಯಿತು ಎಂಬ ಅಂಶವನ್ನು ಕಾಮರೂಪ್‌ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಡಿಸಿಡಿಆರ್‌ಸಿ) ಅಧ್ಯಕ್ಷ ಎಎಫ್‌ಎ ಬೋರಾ ಮತ್ತು ಸದಸ್ಯರಾದ ಅರ್ಚನಾ ದೇಕಾ ಲಖರ್ ಮತ್ತು ಟುಟುಮೋನಿ ದೇವಾ ಗೋಸ್ವಾಮಿ ಅವರಿದ್ದ ಪೀಠ ಗಮನಿಸಿತು

"ಸ್ವಚ್ಛತೆ ಕಾಪಾಡುವುದು ಚಿತ್ರಮಂದಿರದ ಮಾಲೀಕರ ಕರ್ತವ್ಯ ... ಚಿತ್ರ ಮಂದಿರ  ಸ್ವಚ್ಛವಾಗಿರಲಿಲ್ಲ ನೆಲದ ಮೇಲೆ ಬಿದ್ದಿದ್ದ ಪಾಪ್‌ಕಾರ್ನ್ ಮತ್ತಿತರ ಆಹಾರ ಪದಾರ್ಥಗಳನ್ನು ಅರಸಿ ಮೊಲಗಳು, ಮುಂತಾದವು ಓಡಾಡುತ್ತಿದ್ದವು ಎಂದು ದೂರುದಾರರ ಮೌಖಿಕ ಸಾಕ್ಷ್ಯವು ಸ್ಪಷ್ಟವಾಗಿ ತಿಳಿಸಿದೆ. ಇದರಿಂದಾಗಿ ಪ್ರತಿ ಪ್ರದರ್ಶನದ ನಂತರ ನಿಯಮಿತವಾಗಿ ಕಸ ಗುಡಿಸುತ್ತಿರಲಿಲ್ಲ ಮತ್ತು ಚಿತ್ರಮಂದಿರದ ಸುರಕ್ಷತೆ ಮತ್ತು ನೈರ್ಮಲ್ಯ  ಕಾಪಾಡುವಂತಹ ಮೇಲ್ವಿಚಾರಣೆ  ಮಾಡಿರಲಿಲ್ಲ ಎಂಬ ಅಭಿಪ್ರಾಯವನ್ನು ಇದು ಮೂಡಿಸುತ್ತದೆ” ಎಂದು ಏಪ್ರಿಲ್‌ 25ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಗುವಾಹಟಿಯ ಭಾಂಗಗಢ್‌ನಲ್ಲಿರುವ ಗೆಲೇರಿಯಾ ಚಿತ್ರಮಂದಿರದಲ್ಲಿ ಅಕ್ಟೋಬರ್ 20, 2018ರಂದು ಈ ಘಟನೆ ನಡೆದಿತ್ತು. ಅದಾದ ಐದು ತಿಂಗಳ ಬಳಿಕ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಾಗಿತ್ತು. ಈ ವರ್ಷ ಮಾರ್ಚ್ 30ರಂದು ವಾದಗಳ  ಆಲಿಸುವಿಕೆ ಪೂರ್ಣಗೊಂಡಿತ್ತು.

ಚಿತ್ರದ ಪ್ರದರ್ಶನದ ವೇಳೆ ಮಧ್ಯಂತರದಲ್ಲಿ ತನಗೆ ಏನೋ ಕಚ್ಚಿ ರಕ್ತ ಸುರಿಯುತ್ತಿರುವ ಅನುಭವವಾಯಿತು. ಏನು ಕಚ್ಚಿದೆ ಎಂದು ಆರಂಭದಲ್ಲಿ ತಿಳಿಯದ ಕಾರಣ ಎರಡು ಗಂಟೆಗಳ ಕಾಲ ನಿಗಾ ಇಡಲಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗಲೂ ಚಿತ್ರಮಂದಿರದ ವ್ಯವಸ್ಥಾಪಕರು ನಿರ್ಲಕ್ಷ್ಯ ತೋರಿದರು. ತನಗಾದ ಮಾನಸಿಕ ಯಾತನೆಗಾಗಿ ₹ 3.5 ಲಕ್ಷ, ನೋವು ಮತ್ತು ಸಂಕಟಕ್ಕೆ ₹ 2.5 ಲಕ್ಷ ಮತ್ತು ಉಳಿದ ವೈದ್ಯಕೀಯ ವೆಚ್ಚ ಸೇರಿದಂತೆ ₹ 6 ಲಕ್ಷ ಪರಿಹಾರ ನೀಡಬೇಕೆಂದು ದೂರುದಾರ ಮಹಿಳೆ ಕೋರಿದ್ದರು. 

Kannada Bar & Bench
kannada.barandbench.com