ಇ ಡಿ ಪ್ರಕರಣಗಳಲ್ಲಿ ಜಾಮೀನು ಯಾರಿಗೆ ದೊರೆಯುತ್ತದೆ ಹೇಳಿಕೆ ವಿವಾದ: ಆಕ್ಷೇಪಿತ ನ್ಯಾಯಾಧೀಶರಿಗೆ ದಾವೆಯ ಮರು ವರ್ಗಾವಣೆ

ಇಂತಹ ಹೇಳಿಕೆ ನೀಡಿದ್ದಕ್ಕಾಗಿ ನ್ಯಾಯಾಧೀಶರೊಬ್ಬರ ವಿರುದ್ಧ ಪಕ್ಷಪಾತದ ಆರೋಪ ಮಾಡಲಾಗದು ಎಂದು ಹೈಕೋರ್ಟ್ ಹೇಳಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಇ ಡಿ ಪ್ರಕರಣಗಳಲ್ಲಿ ಜಾಮೀನು ಯಾರಿಗೆ ದೊರೆಯುತ್ತದೆ ಹೇಳಿಕೆ ವಿವಾದ: ಆಕ್ಷೇಪಿತ ನ್ಯಾಯಾಧೀಶರಿಗೆ ದಾವೆಯ ಮರು ವರ್ಗಾವಣೆ

“ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಎಂದು ಹೇಳಿದ್ದ ನ್ಯಾಯಾಧೀಶರೊಬ್ಬರಿಂದ ಭೂಷಣ್‌ ಸ್ಟೀಲ್‌ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಈಚೆಗೆ ವಜಾಗೊಳಿಸಿದ್ದಾರೆ [ಅಜಯ್‌ ಎಸ್‌ ಮಿತ್ತಲ್‌ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಇಂತಹ ಹೇಳಿಕೆ ನೀಡಿದ್ದಕ್ಕಾಗಿ ನ್ಯಾಯಾಧೀಶರ ವಿರುದ್ಧ ಪಕ್ಷಪಾತದ ಆರೋಪ ಮಾಡಲಾಗದು ಎಂದು ದೆಹಲಿ ಹೈಕೋರ್ಟ್ ತಿಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಇಂತಹ ಹೇಳಿಕೆ ನೀಡಿದ್ದರೂ ಅವರು ಪಕ್ಷಪಾತ ಹೊಂದಿದ್ದಾರೆ ಎಂದು ಊಹಿಸಲಾಗದು ಎಂಬುದಾಗಿ ಮೇ 28ರ ಆದೇಶದಲ್ಲಿ ಹೈಕೋರ್ಟ್‌ ತಿಳಿಸಿತ್ತು.

ಹೈಕೋರ್ಟ್‌ನ ಅವಲೋಕನಗಳು ಮತ್ತು ಕುಮಾರ್ ಅವರ ಹೇಳಿಕೆಗಳನ್ನು ಪರಿಗಣಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಂಜು ಬಜಾಜ್ ಚಂದನಾ ಅವರು ನ್ಯಾಯಾಧೀಶ ಜಗದೀಶ್‌ ಕುಮಾರ್‌ ಅವರ ಹೇಳಿಕೆಗಳು ಬಹು ವ್ಯಾಖ್ಯಾನಗಳು ಮತ್ತು ತೀರ್ಮಾನಗಳಿಗೆ ಒಳಪಟ್ಟಿರುತ್ತವೆ ಎಂದರು.

ಹೀಗಾಗಿ ಅರ್ಜಿ ವಜಾಗೊಳಿಸಿದ ಜಿಲ್ಲಾ ನ್ಯಾಯಾಲಯ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿದ್ದ ತನ್ನ ಈ ಹಿಂದಿನ ಆದೇಶವನ್ನು ರದ್ದುಗೊಳಿಸಿ ನ್ಯಾಯಾಧೀಶ ಕುಮಾರ್‌ ಅವರಿಗೆ ಮರು ನಿಯೋಜಿಸಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಜಯ್ ಎಸ್ ಮಿತ್ತಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ಕುಮಾರ್ ಅವರು ಏಪ್ರಿಲ್ 10 ರಂದು ನಡೆದ ವಿಚಾರಣೆ ವೇಳೆ ನೀಡಿದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು.

ನ್ಯಾಯಾಧೀಶ ಕುಮಾರ್ ಅವರೆದುರು ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ಆರೋಪಿಯೂ ಆಗಿರುವ ಮಿತ್ತಲ್‌ ಅವರ ಪತ್ನಿ ವಿಚಾರಣೆ ವೇಳೆ ಉಪಸ್ಥಿತರಿದ್ದರು. ವಕೀಲರು ನ್ಯಾಯಾಲಯದಿಂದ ಹೊರಬಂದಾಗ ನ್ಯಾಯಾಲಯದ ಸಿಬ್ಬಂದಿ ಜೊತೆ ಮಾತನಾಡಿದ ನ್ಯಾಯಾಧೀಶ ಜಗದೀಶ್‌ ಕುಮಾರ್‌ ಅವರನ್ನುದ್ದೇಶಿಸಿ “ಅವರು ವಿಚಾರಣಾ ದಿನಾಂಕಗಳನ್ನು ಪಡೆಯುತ್ತಿರಲಿ. ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯದ ಹಿತಾಸಕ್ತಿಯ ಕಾರಣಕ್ಕೆ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಬೇಕು ಎಂದು ಪ್ರಕರಣದ ಆರೋಪಿಯಾಗಿರುವ ಅಜಯ್ ಎಸ್ ಮಿತ್ತಲ್ ಅವರು ಕೋರಿದ್ದರು.

ಮೇ 1ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಚಂದನಾ ದಾವೆಯ ವಿಚಾರಣೆಯನ್ನು ನ್ಯಾಯಾಧೀಶ ಕುಮಾರ್ ಅವರಿಂದ ಮತ್ತೊಬ್ಬ ನ್ಯಾಯಾಧೀಶ  ಮುಖೇಶ್ ಕುಮಾರ್ ಅವರಿಗೆ ವರ್ಗಾಯಿಸಿ ಆದೇಶಿಸಿದ್ದರು. ಇದನ್ನು ಜಾರಿ ನಿರ್ದೇಶನಾಲಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ನ್ಯಾಯಾಧೀಶರ ಹೇಳಿಕೆ ಇ ಡಿ ಪರವಾಗಿ ಪಕ್ಷಪಾತ ಎಸಗದಿರುವುದರಿಂದ ಅವರಿಂದ ಪ್ರಕರಣ ವರ್ಗಾಯಿಸುವಂತಿಲ್ಲ ಎಂದು ಮೇ 28 ರಂದು, ಹೈಕೋರ್ಟ್‌ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಹೇಳಿದ್ದರು. ಸಿಬ್ಬಂದಿ ಮತ್ತು ನ್ಯಾಯಾಧೀಶರ ನಡುವಿನ ಸಂಬಂಧವನ್ನು ಗೌಪ್ಯವಾಗಿ ಪರಿಗಣಿಸಬೇಕು ಎಂದು ಕೂಡ ಆಗ ಹೈಕೋರ್ಟ್‌ ಹೇಳಿತ್ತು.  

ಈ ಬೆಳವಣಿಗೆಗಳ ಬಳಿಕ ಅಜಯ್‌ ಮಿತ್ತಲ್‌ ಅವರು ಪ್ರಕರಣ ವರ್ಗಾವಣೆ ಕೋರಿದ್ದ ಅರ್ಜಿಯನ್ನು ಇದೀಗ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿ ಈ ಹಿಂದೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಕುಮಾರ್‌ ಅವರಿಗೇ ಮತ್ತೆ ವರ್ಗಾಯಿಸಿದೆ.

Kannada Bar & Bench
kannada.barandbench.com