ಜಿಲ್ಲಾ ನ್ಯಾಯಾಧೀಶರಾದ ಭರತ್ ಕುಮಾರ್ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಆಗಿ ನೇಮಕ

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಎಲ್‌ ರಘುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಉಳಿದ ವರ್ಗಾವಣೆಯ ವಿವರಗಳನ್ನು ಮುಂದೆ ಓದಿ.
K S Bharath Kumar, Registrar General, Karnataka HC
K S Bharath Kumar, Registrar General, Karnataka HC
Published on

ಜಿಲ್ಲಾ ನ್ಯಾಯಾಧೀಶರಾದ ಕೆ ಎಸ್ ಭರತ್ ಕುಮಾರ್ ಅವರನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ ಮಾಡಿ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶ ಹೊರಡಿಸಿದೆ. ಭರತ್‌ ಕುಮಾರ್‌ ಅವರು ಹೈಕೋರ್ಟ್‌ನ ವಿಚಕ್ಷಣಾ ದಳದ ರಿಜಿಸ್ಟ್ರಾರ್‌ ಆಗಿದ್ದರು.

ಹಾಲಿ ರಿಜಿಸ್ಟ್ರಾರ್‌ ಜನರಲ್‌ ಆಗಿದ್ದ ಬಿ ಮುರುಳೀಧರ್‌ ಪೈ ಅವರನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ನ್ಯಾ. ರಾಮಚಂದ್ರ ಹುದ್ದಾರ್‌ ಅವರನ್ನು ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದರಿಂದ ಆ ಸ್ಥಾನ ತೆರವಾಗಿತ್ತು.

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಎಲ್‌ ರಘುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ನ್ಯಾ. ವೆಂಕಟೇಶ್‌ ನಾಯಕ್‌ ಅವರು ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರಿಂದ ಆ ಹುದ್ದೆ ಖಾಲಿಯಾಗಿತ್ತು.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರನ್ನು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಲ್‌ ವಿಜಯಲಕ್ಷ್ಮಿ ದೇವಿ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ಲಘು ವ್ಯಾಜ್ಯಗಳ ವಿಚಾರಣಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾ ತ್ಯಾಗರಾಜ ಎನ್‌. ಇನವಲ್ಲಿ ಅವರನ್ನು ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಹೈಕೋರ್ಟ್‌ನ ಅಂಕಿ-ಸಂಖ್ಯೆ ಮತ್ತು ಮರುಪರಿಶೀಲನಾ ರಿಜಿಸ್ಟ್ರಾರ್‌ ಬಿ ವಿ ರೇಣುಕಾ ಅವರನ್ನು ಬೆಂಗಳೂರಿನ ಲಘು ವ್ಯಾಜ್ಯಗಳ ವಿಚಾರಣಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.

Kannada Bar & Bench
kannada.barandbench.com