

ಬಿಹಾರದ ನವಾಡಾ ಜಿಲ್ಲೆಯಲ್ಲಿ ನಿಯೋಜಿತರಾಗಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಶಿಲ್ಪಿ ಸೋನಿರಾಜ್ ಶುಕ್ರವಾರ ಬೆಳಗ್ಗೆ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ಅವರು ಆಸ್ಪತ್ರೆಗೆ ತರುವ ವೇಳೆಗಾಗಲೇ ನಿಧನ ಹೊಂದಿದ್ದರು ಎನ್ನಲಾಗಿದೆ.
ಅವರ ದೇಹವನ್ನ ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಐಜಿಐಎಂಎಸ್) ಕಳುಹಿಸಲಾಗಿದೆ. ಎರಡು-ಮೂರು ದಿನಗಳಲ್ಲಿ ವರದಿ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
"ಮೇಡಂಗೆ ಏನೋ ಆಗಿದೆ, ಅವರು ಪ್ರತಿಕ್ರಿಯಿಸುತ್ತಿಲ್ಲ ಎಂದು ನಮಗೆ ಬೆಳಿಗ್ಗೆ 6-6:30 ರ ಸುಮಾರಿಗೆ ನ್ಯಾಯಾಲಯದ ಕಡೆಯಿಂದ ತಿಳಿದುಬಂದಿತು. ಜನರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು" ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿಎಸ್‌ಪಿ ಪ್ರಧಾನ ಕಚೇರಿ) ನಿಶು ಮಲಿಕ್ ಬಾರ್ & ಬೆಂಚ್‌ಗೆ ತಿಳಿಸಿದರು.
ಜಿಲ್ಲಾ ನ್ಯಾಯಾಧೀಶರ ಸಾವಿನಲ್ಲಿ ಶಂಕಾಸ್ಪದ ಅಂಶವೇನಾದರೂ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ತನಿಖಾ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಟ್ನಾದಲ್ಲಿನ ಐಜಿಐಎಂಎಸ್ ಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ, ನಾವು ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ," ಎಂದರು.
"ನಿನ್ನೆ ರಾತ್ರಿ, ಅವರು ಚಹಾ ಕುಡಿಯಲು ಹೋಗಿದ್ದರು. ಹೆದ್ದಾರಿಯಲ್ಲಿ ರಾಜೌಲಿ ಚೆಕ್ ಪೋಸ್ಟ್ ಇದೆ. ಅಲ್ಲಿ ಅವರು ಚಹಾ ಕುಡಿಯಲು ಹೋಗಿದ್ದರು..." ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ.
ನವಾಡಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೋನಿರಾಜ್ ರಾಜೌಲಿ ಚೆಕ್ ಪೋಸ್ಟ್ ನಿಂದ ಹಿಂತಿರುಗಿದ ನಂತರ ನಿದ್ರೆಗೆ ಜಾರಿದ್ದರು. "ಬೆಳಿಗ್ಗೆ, ಮನೆಯಲ್ಲಿದ್ದ ಆಕೆಯ ಆರೈಕೆದಾರರು ಅವರು ಪ್ರತಿಕ್ರಿಯಿಸದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಸೋನಿರಾಜ್ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಈ ವಿಷಯದಲ್ಲಿ ಅವರ ಉಸ್ತುವಾರಿ ಅಧಿಕಾರಿ ಹೇಳಿಕೆ ನೀಡಿದ್ದಾರೆ" ಎಂದು ತಿಳಿಸಿದರು.
ಸೋನಿರಾಜ್ 1973 ರಲ್ಲಿ ಜನಿಸಿದ್ದು, 2016 ರಲ್ಲಿ ಬಿಹಾರ ಸುಪೀರಿಯರ್ ಜುಡಿಷಿಯಲ್ ಸೇವೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇರ್ಪಡೆಗೊಂಡರು. ಅವರು ಮೊದಲು ಗಯಾದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು, ಅಲ್ಲಿ ಅವರಿಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.