

ತಮಿಳುನಾಡಿನಲ್ಲಿ ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ (ಎಸ್‌ಐಆರ್) ಆದೇಶಿಸಿರುವುದನ್ನು ಪ್ರಶ್ನಿಸಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ
ಕಳೆದ ಜೂನ್ 24ರಂದು ಹೊರಡಿಸಿದ ಆದೇಶ ಆಧರಿಸಿ ತಮಿಳುನಾಡಿನಲ್ಲಿಯೂ ಎಸ್‌ಐಆರ್‌ಗೆ ಮುಂದಾಗುವಂತೆ ಅಕ್ಟೋಬರ್ 27 ರಂದು ಇಸಿಐ ಹೊರಡಿಸಿದ ಆದೇಶಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಆರ್ ಎಸ್ ಭಾರತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಆದೇಶ ಸಂವಿಧಾನಬಾಹಿರವಾಗಿದ್ದು ಇದು ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿ ನೀಡಿದ ಆದೇಶವಾಗಿದೆ.
ಪ್ರಜಾ ಪ್ರತಿನಿಧಿ ಕಾಯಿದೆ 1950 ಮತ್ತು ಮತದಾರರ ನೋಂದಣಿ ನಿಯಮಾವಳಿ 1960ಕ್ಕೆ ಈ ಆದೇಶ ವ್ಯತಿರಿಕ್ತವಾದುದು.
ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳನ್ನು ಆದೇಶ ಉಲ್ಲಂಘಿಸಲಾಗಿದ್ದು ನೈಜ ಮತದಾರರ ಸಾಮೂಹಿಕ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು.
ತಮಿಳುನಾಡಿನಲ್ಲಿ ಈಗಾಗಲೇ ಮತದಾರ ಪಟ್ಟಿಗಳು ಪರಿಷ್ಕೃತವಾಗಿವೆ. ಹೀಗಾಗಿ ಮತ್ತೆ ಎಸ್‌ಐಆರ್ ನಡೆಸುವುದು ಅನಗತ್ಯ ಮತ್ತು ನಿಷ್ಪ್ರಯೋಜಕ.
ನಾಗರಿಕತೆ ಪರಿಶೀಲನೆ ಮಾಡಲು ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಇದೆ; ಮತದಾರ ನೋಂದಣಿ ನೌಕರರಿಗೆ ಅಲ್ಲ.
ಎಸ್‌ಐಆರ್ ವೇಳೆ ಪ್ಯಾನ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇತ್ಯಾದಿ ಸಾಮಾನ್ಯ ದಾಖಲೆಗಳನ್ನು ಸ್ವೀಕರಿಸುತ್ತಿಲ್ಲ.
ತಮಿಳುನಾಡಿನಲ್ಲಿ ಮಳೆಗಾಲ ಮತ್ತು ಹಬ್ಬಗಳ ಸಮಯ ಆರಂಭವಾಗಿರುವಾಗ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಆಮೂಲಾಗ್ರವಾಗಿ ಪರಿಷ್ಕರಿಸಲು ಮುಂದಾಗುವುದು ಸೂಕ್ತವಲ್ಲ.
ಇಸಿಐ ಜೂನ್ 24 ಮತ್ತು ಅಕ್ಟೋಬರ್ 27ರಂದು ಹೊರಡಿಸಿದ ಆದೇಶಗಳನ್ನು ರದ್ದುಪಡಿಸಬೇಕು.
ತಮಿಳುನಾಡಿನಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ತಡೆ ನೀಡಬೇಕು.
ಬಿಹಾರದಲ್ಲಿ ಎಸ್‌ಐಆರ್‌ಗೆ ಮುಂದಾಗುವಂತೆ ಕಳೆದ ಜೂನ್‌ನಲ್ಲಿ ನಿರ್ದೇಶಿಸಲಾಗಿತ್ತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ ಸೇರಿದಂತೆ ಹಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.
ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸುವಂತೆ ಇಸಿಐ ಅಕ್ಟೋಬರ್ 27, 2025ರಂದು ಆದೇಶಿಸಿತ್ತು.