ಜೀವನಾಂಶ ನೀಡಿ ಇಲ್ಲವೇ ಡಿಎನ್ಎ ಪರೀಕ್ಷೆಗೆ ಒಳಗಾಗಿ: ಮಕ್ಕಳ ತಂದೆ ನಾನಲ್ಲ ಎಂದವನಿಗೆ ಅಲಾಹಾಬಾದ್ ಹೈಕೋರ್ಟ್ ಎಚ್ಚರಿಕೆ

ಬಗೆಹರಿಸಲಾಗದ ಪಿತೃತ್ವ ವಿವಾದ ಇದ್ದಾಗ ಜೀವನಾಂಶ ನಿರಾಕರಿಸುವುದು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Allahabad High Court
Allahabad High Court

ತನ್ನ ಮಕ್ಕಳಿಗೆಜೀವನಾಂಶ ನೀಡಬೇಕು ಇಲ್ಲದೇ ಹೋದಲ್ಲಿ ತಾನು ಆ ಮಕ್ಕಳ ತಂದೆಯಲ್ಲ ಎಂಬುದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಒಳಗಾಗಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ವ್ಯಕ್ತಿಯೊಬ್ಬನಿಗೆ ತಾಕೀತು ಮಾಡಿದೆ.

ಬಗೆಹರಿಸಲಾಗದ ಪಿತೃತ್ವ  ವಿವಾದ ಇದ್ದಾಗ ಜೀವನಾಂಶ ನಿರಾಕರಿಸುವುದು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನ್ಯಾ. ಪ್ರಶಾಂತ್ ಕುಮಾರ್ ತಿಳಿಸಿದರು.

ಪಿತೃತ್ವ ವಿವಾದಗಳನ್ನು ಪರಿಹರಿಸುವಲ್ಲಿ ಡಿಎನ್‌ಎ ಪರೀಕ್ಷೆಯು ನಿರ್ಣಾಯಕ ಸಾಧನವಾಗಿದ್ದು ಮಕ್ಕಳ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಡಿಎನ್‌ಎ ಪರೀಕ್ಷೆಯಿಂದ ಆಘಾತ, ಕಳಂಕದಂತಹ ವಿಶಾಲ ಪರಿಣಾಮ ಉಂಟಾಗಬಹುದಾದರೂ ಬಗೆಹರಿಸಲಾಗದ ಪಿತೃತ್ವ ವಿವಾದಗಳು ಸೃಷ್ಟಿಸುವ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿರ್ಲಕ್ಷಿಸಲಾಗದು ಎಂದು ಮೇ 30ರಂದು ನೀಡಿದ ತೀರ್ಪಿನಲ್ಲಿ ಅದು ಹೇಳಿತು.

ಮಕ್ಕಳು ತಮ್ಮದಲ್ಲ ಹಾಗಾಗಿ ಮಕ್ಕಳಿಗೆ ಜೀವನಾಂಶ ನೀಡುವುದಿಲ್ಲ ಎಂದಿದ್ದ ಅರ್ಜಿದಾರ  ಡಿಎನ್‌ಎ ಪರೀಕ್ಷೆಗೆ ಒಳಪಡಬೇಕು ಎಂಬುದಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇತ್ಯರ್ಥವಾಗದ ಪಿತೃತ್ವ ವಿವಾದಗಳ ಪರಿಣಾಮಗಳನ್ನು ಒತ್ತಿ ಹೇಳುವಾಗ ಮಕ್ಕಳ ಹಿತಾಸಕ್ತಿಯನ್ನು ಅವರಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಮುಖ್ಯವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನಿರ್ವಹಣೆಯ ಹಕ್ಕು ಕೇವಲ ಕಾನೂನು ನಿಬಂಧನೆಯಾಗಿಲ್ಲ ಆದರೆ ಮೂಲಭೂತ ಮಾನವ ಹಕ್ಕುಗಳಲ್ಲಿ ಆಳವಾಗಿ ಬೇರೂರಿದೆ ಎಂದು ನ್ಯಾಯಾಲಯ ಹೇಳಿದೆ.

“ಮಾನವ ಹಕ್ಕುಗಳ ಕುರಿತಾದ ಸಾರ್ವತ್ರಿಕ ಘೋಷಣೆಯು ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ಆರೈಕೆಯನ್ನು ಒಳಗೊಂಡಿರುವ ಉತ್ತಮ ಜೀವನ ಮಟ್ಟಕ್ಕೆ ಒತ್ತು ನೀಡುತ್ತದೆ. ಮಕ್ಕಳ ಸಂದರ್ಭದಲ್ಲಿ, ಅವರ ಉಳಿವು, ಬೆಳವಣಿಗೆ ಮತ್ತು ಅಭಿವೃದ್ಧಿ ನಿರ್ವಹಣೆ ಅನಿವಾರ್ಯವಾಗಿದೆ. ಬಗೆಹರಿಸಲಾಗದ ಪಿತೃತ್ವ ಸಮಸ್ಯೆಗಳಿಂದಾಗಿ ಜೀವನಾಂಶವನ್ನು ನಿರಾಕರಿಸುವುದು ಅವರ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ”ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಪ್ರಕರಣದಲ್ಲಿ ಮಕ್ಕಳ ತಂದೆಯೂ ತಾನಲ್ಲ, ಡಿಎನ್‌ಎ ಪರೀಕ್ಷೆಗೂ ಒಳಗಾಗುವುದಿಲ್ಲ ಎಂದು ಹೇಳುವ ಮೂಲಕ ವ್ಯಕ್ತಿ ಏಕಕಾಲಕ್ಕೆ ಎರಡೂ ಆಟ ಆಡುವಂತಿಲ್ಲ. ಕೌಟುಂಬಿಕ  ನ್ಯಾಯಾಲಯದ ಆದೇಶದಂತೆ ಆತ ಜೀವನಾಂಶ ಪಾವತಿಸಬೇಕು ಅಥವಾ ಡಿಎನ್‌ಎ ಪರೀಕ್ಷೆಗೆ ಒಳಗಾಗಬೇಕು ಎಂದು ಅದು ವ್ಯಕ್ತಿಗೆ ನಿರ್ದೇಶಿಸಿದೆ. ಇಲ್ಲವಾದಲ್ಲಿ ಆತನ ವಿರುದ್ಧ ಭಾರತೀಯ ಸಾಕ್ಷ್ಯ ಕಾಯಿದೆಯಡಿ ಪ್ರತಿಕೂಲ ತೀರ್ಮಾನ ಕೈಗೊಳ್ಳಬೇಕಾಗಬಹುದು ಎಂದು ಅದು ಎಚ್ಚರಿಕೆ ನೀಡಿತು.

Kannada Bar & Bench
kannada.barandbench.com