ಪರಿಣಾಮಕ್ಕೆ ಹೆದರಿ ಸರಿಯಾದ ತೀರ್ಮಾನದಿಂದ ಹಿಂದೆ ಸರಿಯಬೇಡಿ; ನ್ಯಾ. ಹನ್ಸ್‌ರಾಜ್‌ ಖನ್ನಾ ನೆನೆದ ನ್ಯಾ. ಮುದಗಲ್‌

1976ರಲ್ಲಿ ಎಡಿಎಂ ಜಬಲ್‌ಪುರ್ ವರ್ಸಸ್‌ ಶಿವಕಾಂತ್‌ ಶುಕ್ಲಾ ಪ್ರಕರಣದಲ್ಲಿ ನ್ಯಾ. ಹನ್ಸ್‌ ರಾಜ್‌ ಖನ್ನಾ ಅವರು ನ್ಯಾಯದ ಪರ ನಿಂತು ಬರೆದ ಅಲ್ಪಮತದ ಆದರೆ ಭಿನ್ನ ತೀರ್ಪು ಚರಿತ್ರಾರ್ಹವಾದದ್ದು ಎಂದ ನ್ಯಾ. ಮುದಗಲ್‌.
ಪರಿಣಾಮಕ್ಕೆ ಹೆದರಿ ಸರಿಯಾದ ತೀರ್ಮಾನದಿಂದ ಹಿಂದೆ ಸರಿಯಬೇಡಿ; ನ್ಯಾ. ಹನ್ಸ್‌ರಾಜ್‌ ಖನ್ನಾ ನೆನೆದ ನ್ಯಾ. ಮುದಗಲ್‌
Published on

“ಪರಿಣಾಮಕ್ಕೆ ಹೆದರಿ ಸರಿಯಾದ ತೀರ್ಮಾನದಿಂದ ಹಿಂದೆ ಸರಿಯಬಾರದು. ಸರಿಯಾದ ಸಮಯ ಬಂದಾಗ ನಿಮ್ಮನ್ನು ಸ್ಮರಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ ಎಸ್‌ ಮುದಗಲ್ ಕಿವಿಮಾತು ಹೇಳಿದರು.

ಹೈಕೋರ್ಟ್‌ಗೆ ಶನಿವಾರದಿಂಧ ಚಳಿಗಾಲದ ರಜೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ 22ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ನ್ಯಾ. ಮುದಗಲ್‌ ಅವರಿಗೆ ರಾಜ್ಯ ಕಾನೂನು ಪರಿಷತ್‌ ವತಿಯಿಂದ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಹಲವು ಸಂದರ್ಭದಲ್ಲಿ ಆಡಳಿತಾತ್ಮಕ ಕೆಲಸ ನಿಭಾಯಿಸುವಾಗ ಸ್ವತಂತ್ರ ನಿರ್ಧಾರ ಕೈಗೊಳ್ಳಲು ನಾವು ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ 1661ರ ಕೇಂಬ್ರಿಜ್‌ ಸ್ಟೂಡೆಂಟ್‌ ನೋಟ್‌ಬುಕ್‌ನಲ್ಲಿ ಖ್ಯಾತ ವಿಜ್ಞಾನಿ ಸರ್‌ ಐಸಾಕ್‌ ನ್ಯೂಟನ್‌ “ಪ್ಲೇಟೊ, ಅರಿಸ್ಟಾಟಲ್‌ ನನ್ನ ಸ್ನೇಹಿತರು. ಆದರೆ, ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಸತ್ಯ ಎಂದು ಬರೆದಿದ್ದನ್ನು ನೆನಪಿಸಿಕೊಳ್ಳಬಹುದು” ಎಂದರು.

ಮುಂದುವರಿದು, “ಇಂಥ ಸಂದರ್ಭಗಳನ್ನು ಹಲವಾರು ವರ್ಷಗಳಾದ ಬಳಿಕ ಸಂಭ್ರಮಿಸಲಾಗುತ್ತದೆ. 1976ರಲ್ಲಿ ಎಡಿಎಂ ಜಬಲ್‌ಪುರ್ ವರ್ಸಸ್‌ ಶಿವಕಾಂತ್‌ ಶುಕ್ಲಾ ಪ್ರಕರಣದಲ್ಲಿ ನ್ಯಾಯಮೂರ್ತಿ ಹನ್ಸ್‌ ರಾಜ್‌ ಖನ್ನಾ ಅವರು ನ್ಯಾಯದ ಪರ ನಿಂತು ಬರೆದ ಅಲ್ಪಮತದ ಆದರೆ ಭಿನ್ನ ತೀರ್ಪು (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದ ತೀರ್ಪ) ಚರಿತ್ರಾರ್ಹವಾದದ್ದು. ತಮ್ಮ ವೃತ್ತಿಯನ್ನು ಒತ್ತೆಯಾಗಿಟ್ಟು ಆ ತೀರ್ಪನ್ನು ಅವರು ಬರೆದಿದ್ದರು. 41 ವರ್ಷಗಳ ಬಳಿಕ 2017ರಲ್ಲಿ ಕೆ ಎಸ್‌ ಪುಟ್ಟಸ್ವಾಮಿ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಆ ಐತಿಹಾಸಿಕ ಭಿನ್ನ ತೀರ್ಪನ್ನು ಎತ್ತಿ ಹಿಡಿಯಲಾಯಿತು” ಎಂದು ನೆನಪಿಸಿದರು.

“ಬೆಂಕಿ ಮತ್ತು ಸುತ್ತಿಗೆ ಏಟು ತಿನ್ನುವ ಕತ್ತರಿ ಹರಿತವಾಗುತ್ತದೆಯೇ ವಿನಾ ಅನುಕೂಲಕರ ವಾತಾವರಣದಲ್ಲಿ ಅದು ಸಾಧ್ಯವಾಗುವುದಿಲ್ಲ” ಎಂದು ವೃತ್ತಿ ಒತ್ತಡದ ಬಗ್ಗೆ ಗಮನಸೆಳೆದರು.

ಹೈಕೋರ್ಟ್‌ನ ನ್ಯಾಯಾಂಗ ಮತ್ತು ವಿಚಕ್ಷಣಾ ವಿಭಾಗ, ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರಿ ಮೇಲ್ಮನವಿ ನ್ಯಾಯ ಮಂಡಳಿಯ ಮೊದಲ ಮಹಿಳಾ ಮೇಲ್ವಿಚಾರಣಾಧಿಕಾರಿ ಎಂಬ ಖ್ಯಾತಿಗೆ ಭಾಜನರಾಗಿರುವ ನ್ಯಾ. ಮುದಗಲ್‌ ಅವರು ಹೈಕೋರ್ಟ್‌ ಕೊಲಿಜಿಯಂನಲ್ಲಿದ್ದ ಏಕೈಕ ಕನ್ನಡತಿಯಾಗಿದ್ದರು.

ನ್ಯಾ. ಮುದಗಲ್‌ ಅವರ ನಿವೃತ್ತಿ ಬಳಿಕ ಕೊಲಿಜಿಯಂ ಪುನರಚನೆಯಾಗಲಿದ್ದು, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ನ್ಯಾಯಮೂರ್ತಿಗಳಾದ ಅನು ಶಿವರಾಮನ್‌, ಜಯಂತ್‌ ಬ್ಯಾನರ್ಜಿ ಅವರು ಸ್ಥಾನ ಪಡೆಯಲಿದ್ದಾರೆ. ಈ ಮೂವರು ನ್ಯಾಯಮೂರ್ತಿಗಳು ಕ್ರಮವಾಗಿ ದೆಹಲಿ, ಕೇರಳ ಮತ್ತು ಉತ್ತರ ಪ್ರದೇಶ ಮೂಲದವರಾಗಿದ್ದಾರೆ.

Kannada Bar & Bench
kannada.barandbench.com