ವಿಕಲಚೇತನರ ಒಪ್ಪಿಗೆ ಇಲ್ಲದೆ ಅವರ ಕೃತಕ ಅಂಗ ತೋರಿಸುವಂತೆ ಹೇಳದಿರಿ: ಡಿಜಿಸಿಎಗೆ ಸುಪ್ರೀಂಕೋರ್ಟ್

ಅಂಗವಿಕಲ ವ್ಯಕ್ತಿಗಳನ್ನು ವಿಮಾನಯಾನ ಸಂಸ್ಥೆಗಳು ನಡೆಸಿಕೊಳ್ಳುವ ಸಂಬಂಧ ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಮೊದಲು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಡಿಜಿಸಿಎಗೆ ನಿರ್ದೇಶಿಸಿದೆ.
ವಿಕಲಚೇತನರ ಒಪ್ಪಿಗೆ ಇಲ್ಲದೆ ಅವರ ಕೃತಕ ಅಂಗ ತೋರಿಸುವಂತೆ ಹೇಳದಿರಿ: ಡಿಜಿಸಿಎಗೆ ಸುಪ್ರೀಂಕೋರ್ಟ್
Published on

ವಿಮಾನ ಪ್ರಯಾಣದ ವೇಳೆ ಭದ್ರತಾ ತಪಾಸಣೆ ನಡೆಸುವಾಗ ವಿಕಲಚೇತನರಿಗೆ ಅವರ ಕೃತಕ ಅಂಗ ತೆಗೆದು ತೋರಿಸುವಂತೆ ಕೇಳಬಾರದು. ಅವರ ಒಪ್ಪಿಗೆಯಿಲ್ಲದೆ ಅಂಗಾಂಗಳನ್ನು ಎತ್ತದಂತೆ ಕ್ರಮ ಕೈಗೊಳ್ಳಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸುಪ್ರೀಂಕೋರ್ಟ್‌ ಸೂಚಿಸಿದೆ. (ಜೀಜಾ ಘೋಷ್ ಇನ್ನಿತರರು ಹಾಗೂ ಭಾರತೀಯ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ).

ಅಂಗವಿಕಲ ವ್ಯಕ್ತಿಗಳನ್ನು ವಿಮಾನಯಾನ ಸಂಸ್ಥೆಗಳು ನಡೆಸಿಕೊಳ್ಳುವ ಸಂಬಂಧ ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳನ್ನು (ಸಿಎಆರ್‌) ಅಂತಿಮಗೊಳಿಸುವ ಮೊದಲು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಂತೆನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯಂ ಅವರಿದ್ದ ಪೀಠ ಡಿಜಿಸಿಎಗೆ ಹೇಳಿದೆ.

Also Read
ವಿಕಲಚೇತನರ ಮೀಸಲಾತಿ ಬಡ್ತಿಗೂ ಅನ್ವಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸೆರೆಬ್ರಲ್ ಪಾಲ್ಸಿ ಯಿಂದ (ದೇಹದ ಸ್ವಾಧೀನ ಇಲ್ಲದಿರುವುದು) ಬಳಲುತ್ತಿರುವ ಜೀಜಾ ಘೋಷ್ ಅವರನ್ನು ಸ್ಪೈಸ್‌ ಜೆಟ್‌ ಏರ್‌ಲೈನ್ಸ್‌ ಸಿಬ್ಬಂದಿ ವಿಮಾನದಿಂದ ಕೆಳಗೆ ಇಳಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಜೀಜಾ ಅವರಿಗೆ ನ್ಯಾಯಾಲಯ ಈಹಿಂದ ಪರಿಹಾರ ಘೋಷಿಸಿತ್ತು. ಅಲ್ಲದೆ ಅಂಗವಿಕಲ ವ್ಯಕ್ತಿಗಳ ಅಗತ್ಯತೆಗಳನ್ನು ಪರಿಗಣಿಸಿ ಸಿಎಆರ್‌ ಮಾರ್ಗಸೂಚಿಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು. ಮಾರ್ಗಸೂಚಿ ಕುರಿತು ಅರ್ಜಿದಾರರು ನೀಡಿರುವ ಸಲಹೆಗಳನ್ನು ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಮಾರ್ಗಸೂಚಿಗಳನ್ನು ಜುಲೈ 2, 2021 ರಂದು ಪರಿಷ್ಕರಿಸಿ ಸಾರ್ವಜನಿಕರ ಅವಗಾಹನೆಗೆ ನೀಡಲಾಗಿತ್ತು.

ಡಿಸೆಂಬರ್ 1 ರಂದು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ಕರಡು ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಅನೇಕ ಆಕ್ಷೇಪಣೆಗಳನ್ನು ಎತ್ತಿದ್ದರು. 30 ದಿನಗಳಲ್ಲಿ ಡಿಜಿಸಿಎ ಪರಿಗಣನೆಗೆ ಸಲಹೆಗಳನ್ನು ನೀಡುವಂತೆ ಪೀಠ ಅರ್ಜಿದಾರರಿಗೆ ಸೂಚಿಸಿತು.

Kannada Bar & Bench
kannada.barandbench.com