ವೈದ್ಯರ ಕೈಬರಹ: ಔಷಧಗಳ ಕುರಿತ ಸ್ಪಷ್ಟ ಬರಹ ರೋಗಿಗಳ ಹಕ್ಕು ಎಂದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಪಠ್ಯಕ್ರಮದ ಭಾಗವಾಗಿ ವೈದ್ಯಕೀಯ ಔಷಧ ಚೀಟಿಗಳಲ್ಲಿ ಸ್ಪಷ್ಟ ಮತ್ತು ಸ್ಫುಟವಾದ ಕೈಬರಹದ ಪ್ರಾಮುಖ್ಯತೆಯನ್ನು ತಿಳಿಸಲು, ಕಲಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಮುಂದಾಗಬೇಕು ಎಂದ ನ್ಯಾಯಾಲಯ.
Medical prescription, Punjab and Haryana HC
Medical prescription, Punjab and Haryana HC
Published on

ಓದಲು ಸುಲಭಸಾಧ್ಯವಾದಂತಹ ಸ್ಪಷ್ಟವಾದ ವೈದ್ಯಕೀಯ ಔಷಧಗಳ ಕುರಿತ ಬರಹ (ಪ್ರಿಸ್ಕ್ರಿಪ್ಷನ್‌) ಮತ್ತು ರೋಗನಿರ್ಣಯವು (ಡಯಾಗ್ನಾಸಿಸ್‌) ಆರೋಗ್ಯದ ಹಕ್ಕಿನ ಅವಿಭಾಜ್ಯ ಅಂಗವಾಗಿದ್ದು, ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.

ಭಾರತದಾದ್ಯಂತದ ವೈದ್ಯಕೀಯ ಕಾಲೇಜುಗಳಲ್ಲಿ ಪಠ್ಯಕ್ರಮದ ಭಾಗವಾಗಿ ವೈದ್ಯಕೀಯ ಔಷಧ ಚೀಟಿಗಳ ಬರಹದಲ್ಲಿ ಸ್ಪಷ್ಟ ಮತ್ತು ಸ್ಫುಟವಾದ ಕೈಬರಹದ ಪ್ರಾಮುಖ್ಯತೆಯನ್ನು ಪರಿಚಯಿಸಲು ಮತ್ತು ಕಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಜಸ್‌ಗುರ್‌ಪ್ರೀತ್ ಸಿಂಗ್ ಪುರಿ ಅವರು ಆಗಸ್ಟ್ 27 ರಂದು ನೀಡಿದ ತೀರ್ಪಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸಲಹೆ ನೀಡಿದ್ದಾರೆ.

"ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಆರೋಗ್ಯದ ಹಕ್ಕನ್ನು ಒಳಗೊಂಡಿದೆ ಎಂದು ಈ ನ್ಯಾಯಾಲಯವು ಪರಿಗಣಿಸುತ್ತದೆ, ಇದು ಸ್ಪಷ್ಟ ವೈದ್ಯಕೀಯ ಔಷಧ ಚೀಟಿ /ರೋಗನಿರ್ಣಯ/ವೈದ್ಯಕೀಯ ದಾಖಲೆಗಳು ಮತ್ತು ಚಿಕಿತ್ಸೆಯನ್ನು ತಿಳಿದುಕೊಳ್ಳುವ ಹಕ್ಕನ್ನು ಒಳಗೊಂಡಿದೆ" ಎಂದು ನ್ಯಾಯಾಲಯ ಹೇಳಿದೆ.

ಗಣಕೀಕೃತ ಅಥವಾ ಟೈಪ್ ಮಾಡಿದ ಪ್ರಿಸ್ಕ್ರಿಪ್ಷನ್‌ಗಳನ್ನು ಅಳವಡಿಸಿಕೊಳ್ಳುವವರೆಗೆ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ವೈದ್ಯರು ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯುವ ಸೂಚನೆಗಳನ್ನು ಪಾಲಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ.

“ಗಣಕೀಕರಣಗೊಳ್ಳುವವರೆಗೆ ವೈದ್ಯರು ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಮತ್ತು ರೋಗನಿರ್ಣಯವನ್ನು (ಇಂಗ್ಲಿಷ್‌ ವರ್ಣಮಾಲೆಯ) ದೊಡ್ಡ ಅಕ್ಷರಗಳಲ್ಲಿ (ಕ್ಯಾಪಿಟಲ್‌ ಲೆಟರ್ಸ್‌) ಬರೆಯಬೇಕು ಎನ್ನುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಿಲುವನ್ನು ಪರಿಗಣಿಸಿದ್ದು, ಗಣಕೀಕರಣ/ಟೈಪ್ ಮಾಡಿದ ಪ್ರಿಸ್ಕ್ರಿಪ್ಷನ್‌ಗಳ ಉದ್ದೇಶವನ್ನು ಸಾಧಿಸಲು ಸಮಗ್ರ ನೀತಿಯನ್ನು ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅಗತ್ಯವಾದಲ್ಲಿ ಕ್ಲಿನಿಕ್‌/ವೈದ್ಯರಿಗೆ ಹಣಕಾಸಿನ ನೆರವು ನೀಡಲು ಸಹ ಒತ್ತು ನೀಡಬೇಕು. ಈ ಮೇಲಿನ ಪ್ರಕ್ರಿಯೆಗಳನ್ನು ಎರಡು ವರ್ಷಗಳೊಳಗೆ ಪೂರ್ಣಗೊಳಿಸಬೇಕು, ”ಎಂದು ನ್ಯಾಯಾಲಯವು ಆದೇಶಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ, ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ವೈದ್ಯಕೀಯ-ಕಾನೂನು ವರದಿಯೊಂದು ಅಸ್ಪಷ್ಟವಾಗಿರುವುದನ್ನು ಗಮನಿಸಿದ್ದ ನ್ಯಾಯಾಲಯವು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು. ಈ ವೇಳೆ, ನ್ಯಾಯಾಲಯವು ರೋಗಿಗಳು ತಮ್ಮ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಅನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿತ್ತು.

ಈ ವಿಚಾರದಲ್ಲಿ ಸಹಾಯ ಮಾಡಲು ನ್ಯಾಯಾಲಯವು ಭಾರತೀಯ ವೈದ್ಯಕೀಯ ಸಂಘವನ್ನು ಕೇಳಿದ್ದರೂ, ಸಂಸ್ಥೆಯ ಪರವಾಗಿ ಯಾರೂ ಹಾಜರಾಗಿರಲಿಲ್ಲ. ನ್ಯಾಯಾಲಯದ ಆದೇಶದ ನಂತರ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಎಲ್ಲಾ ವೈದ್ಯರು ಪ್ರಿಸ್ಕ್ರಿಪ್ಷನ್‌ಗಳನ್ನು ದೊಡ್ಡಕ್ಷರಗಳಲ್ಲಿ / ದಪ್ಪ ಅಕ್ಷರಗಳಲ್ಲಿ ಬರೆಯುವಂತೆ ಸೂಚಿಸಿದ್ದವು. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಕೂಡ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿತ್ತು.

ತನ್ನ ಅಂತಿಮ ಆದೇಶದಲ್ಲಿ ನ್ಯಾಯಾಲಯವು, ಸ್ಪಷ್ಟವಾದ ಮತ್ತು ಅದಕ್ಕೂ ಮಿಗಿಲಾಗಿ ಡಿಜಿಟಲ್/ಟೈಪ್ ಮಾಡಿದ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ನ ಪ್ರಾಮುಖ್ಯತೆಯು ಅನಿವಾರ್ಯವೂ, ಪ್ರಸ್ತುತತವೂ ಆಗಿದೆ ಎಂದು ಅಭಿಪ್ರಾಯಪಟ್ಟಿದೆ. ವಿಶೇಷವಾಗಿ ತಾಂತ್ರಿಕ ಪ್ರಗತಿಯ ಪ್ರಸಕ್ತ ಯುಗದಲ್ಲಿ, ಒಂದು ಕ್ಲಿಕ್‌ ಮಾಡುವ ಮೂಲಕ ಯಾವುದೇ ಮಾಹಿತಿಯನ್ನು ಪರದೆಯ ಮೇಲೆ ಪಡೆಯಬಹುದಾಗಿರುವ ಈ ಸಂದರ್ಭದಲ್ಲಿ ಇದು ಮಹತ್ವವನ್ನು ಪಡೆಯುತ್ತದೆ ಎಂದು ವಿವರಿಸಿದೆ.

“ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಮಾಹಿತಿಯುಕ್ತ ನಾಗರಿಕರಾಗಿ ವಿಕಸಿತರಾಗಿರುವ ಈ ಸಂದರ್ಭದಲ್ಲಿ ನಮ್ಮಲ್ಲಿ ಬಹುತೇಕರು ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಿರುವ ಯಾವುದೇ ಪೂರಕ ಮಾಹಿತಿಯನ್ನು ಹುಡುಕಲು ವೈದ್ಯರು ಒದಗಿಸಿದ ಪ್ರಿಸ್ಕ್ರಿಪ್ಷನ್/ರೋಗನಿರ್ಣಯವನ್ನು ಪರಿಶೀಲಿಸುವ ಸಾಧ್ಯತೆಯಿದೆ. ಯಾವುದೇ ವಿಷಯದ ಕುರಿತಾದ ಮಾಹಿತಿಯು ಕೇವಲ ಒಂದು ಕ್ಲಿಕ್ ದೂರದಲ್ಲಿದೆ, ”ಎಂದು ನ್ಯಾಯಾಲಯವು ತಿಳಿಸಿತು.

Kannada Bar & Bench
kannada.barandbench.com