ನ್ಯಾಯಾಲಯದ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್ ಆಗಿರುವ ದೆಹಲಿ ರಿಜ್ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ನಿರ್ದೇಶನ ನೀಡಿದ್ದರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಡಿಡಿಎಗೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ [ಬಿಂದು ಕಪೂರಿಯಾ ಮತ್ತು ಸುಭಾಶಿಷ್ ಪಾಂಡಾ ನಡುವಣ ಪ್ರಕರಣ].
ಮರ ಕಡಿದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಇದರಲ್ಲಿ ಲೆ. ಗವರ್ನರ್ ಭಾಗಿಯಾಗಿರುವುದನ್ನು ಎರಡು ದಾಖಲೆಗಳು ಹೇಳುತ್ತಿವೆ ಎಂದಿತು.
"ಇದೇನು? ಇದೆಂತಹ ಲಜ್ಜೆಗೆಟ್ಟ ಕೃತ್ಯ. ದಾಖಲೆಯಲ್ಲಿ ಸಲ್ಲಿಸಲಾದ ಎರಡು ವಿವರಗಳು ಲೆ. ಗವರ್ನರ್ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ," ಎಂದು ಪೀಠ ಕಿಡಿಕಾರಿತು.
“ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವವರು ನಿರ್ದಿಷ್ಟವಾಗಿ ಯಾರು ಎಂಬುದನ್ನು ತಿಳಿಯಲು ಬಯಸುತ್ತೇವೆ. ಯಾರೂ ಪ್ರತಿಕ್ರಿಯಿಸದೆ ಇದ್ದರೆ ಲೆ. ಗವರ್ನರ್ ಅವರೇ ನಿರ್ದೇಶನ ನೀಡಿದ್ದಾರೆ ಎಂದು ಹೇಳಬೇಕಾಗುತ್ತದೆ" ಎಂಬುದಾಗಿ ಅದು ಎಚ್ಚರಿಕೆ ನೀಡಿತು.
ಮರಗಳ ಮಾರಣಹೋಮಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ದಾಖಲೆಯಲ್ಲಿ ನೀಡಿಲ್ಲ ಮತ್ತು ವಿವರವಾದ ವಿಚಾರಣೆ ನಡೆಸುವ ಅಗತ್ಯವಿದೆ. ಪರಿಸರ ರಕ್ಷಣೆಯ ವಿಚಾರವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅದು ಒತ್ತಿ ಹೇಳಿತು.
ಲೆ. ಗವರ್ನರ್ ಭಾಗಿಯಾಗಿದ್ದಾರೆಯೇ ಎಂದು ವಿಚಾರಣೆ ನಡುವೆ ಡಿಡಿಎ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ಕೂಡ ನ್ಯಾಯಾಲಯ ಪ್ರಶ್ನಿಸಿತು.
ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮರ ಕಡಿದಿದ್ದಕ್ಕಾಗಿ ಡಿಡಿಎ ಉಪಾಧ್ಯಕ್ಷ ಸುಭಾಶಿಶ್ ಪಾಂಡಾ ವಿರುದ್ಧ ನ್ಯಾಯಾಲಯ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಲೆ. ಗವರ್ನರ್ ಅವರು ಬಳಿಕ ಮರ ಕಡಿಯಲು ಆದೇಶಿಸಿದ್ದರು ಎಂದು ಕೆಲ ಇಮೇಲ್‌ಗಳಿಂದ ತಿಳಿದು ಬಂದಿದ್ದರೂ ಪ್ರಕರಣದ ತನಿಖೆ ನಡೆಸಲು ಡಿಡಿಎ ರಚಿಸಿದ್ದ ಸಮಿತಿಯು ಇಮೇಲ್ ವಿಚಾರ ತನಿಖೆ ಮಾಡದೆ ಡಿಡಿಎಯ ಮೂವರು ಅಧಿಕಾರಿಗಳ ಮೇಲೆ ಸುಮ್ಮನೆ ಗೂಬೆ ಕೂರಿಸಿದೆ ಎಂದು ನ್ಯಾಯಾಲಯ ತಿಳಿಸಿತು.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಮರ ಕಡಿಯುವ ನಿರ್ದೇಶನ ನೀಡಿರುವುದಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ಹೇಳುವ ಮೂಲಕ ಬೇರೆಯವರ ಮೇಲೆ ಆರೋಪ ಹೊರಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಹೀಗಾಗಿ ಇನ್ನಷ್ಟು ವಿಚಾರಣೆ ನಡೆಸುವ ಸಲುವಾಗಿ ಡಿಡಿಎಯ ಕೆಲ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತು. ಅಲ್ಲದೆ ತಾನು ಕೇಳಿದ ಪ್ರಶ್ನೆಗಳ ಕುರಿತಂತೆ ಅಫಿಡವಿಟ್ ಸಲ್ಲಿಸುವಂತೆಯೂ ಡಿಡಿಎ ಉಪಾಧ್ಯಕ್ಷರಿಗೆ ಅದು ಸೂಚಿಸಿತು.
ಇದೇ ವೇಳೆ ನ್ಯಾಯಾಂಗ ಅಧಿಕಾರಿಗಳನ್ನೇ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡ ಡಿಡಿಎ ಕ್ರಮಕ್ಕೂ ಪೀಠ ಸಿಡಿಮಿಡಿಗೊಂಡಿತು. ಇದು ಅಧಿಕಾರದ ಪ್ರತ್ಯೇಕತೆಯ ತತ್ವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದಿತು.
ಸುಪ್ರೀಂ ಕೋರ್ಟ್ ಅನುಮತಿಯಿಲ್ಲದೆ ಮರ ಕಡಿಯುವಂತಿಲ್ಲ ಎಂಬ ಕುರಿತಂತೆ ದೆಹಲಿ ವೃಕ್ಷ ಸಂರಕ್ಷಣಾ ಕಾಯಿದೆಯಡಿಯಲ್ಲಿ ಸ್ಪಷ್ಟ ನಿಯಮಾವಳಿ ಜಾರಿಗೆ ತರುವ ಅಗತ್ಯವಿದೆ ಎಂದು ಾದು ಹೇಳಿತು. ನಾಳೆ (ಜೂನ್ 26) ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.