'ನೂತನ ಅಪರಾಧಿಕ ಕಾನೂನುಗಳ ಶೀರ್ಷಿಕೆ ಇಂಗ್ಲಿಷ್‌ನಲ್ಲಿ ಇರಬೇಕೆ?' ಪರಿಶೀಲಿಸಲಿದೆ ಕೇರಳ ಹೈಕೋರ್ಟ್

ಮೂರು ಹೊಸ ಅಪರಾಧಿಕ ಕಾನೂನುಗಳಿಗೆ ನೀಡಲಾದ ಹಿಂದಿ ಹೆಸರುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
'ನೂತನ ಅಪರಾಧಿಕ ಕಾನೂನುಗಳ ಶೀರ್ಷಿಕೆ ಇಂಗ್ಲಿಷ್‌ನಲ್ಲಿ ಇರಬೇಕೆ?' ಪರಿಶೀಲಿಸಲಿದೆ ಕೇರಳ ಹೈಕೋರ್ಟ್

ಸಂಸತ್ತು ಜಾರಿಗೊಳಿಸುವ ಕಾನೂನುಗಳ ಪಠ್ಯ ಮಾತ್ರವೇ ಅಲ್ಲದೆ, ಅವುಗಳ ಶೀರ್ಷಿಕೆ ಕೂಡ ಇಂಗ್ಲಿಷ್‌ನಲ್ಲಿಯೇ ಇರಬೇಕು ಎಂದು ಸಂವಿಧಾನದ 348ನೇ ವಿಧಿ ಕಡ್ಡಾಯಗೊಳಿಸುತ್ತದೆಯೇ ಎನ್ನುವ ವಿಚಾರವನ್ನು ಮೂರು ನೂತನ ಅಪರಾಧಿಕ ಕಾನೂನುಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕೇರಳ ಹೈಕೋರ್ಟ್‌ ಬುಧವಾರ ನಿರ್ಧರಿಸಿದೆ [ಪಿವಿ ಜೀವೇಶ್ (ವಕೀಲರು) ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮೂರು ನೂತನ ಅಪರಾಧಿಕ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳಿಗೆ ನೀಡಲಾದ ಹಿಂದಿ ಹೆಸರುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ  ಮುಖ್ಯ ನ್ಯಾಯಮೂರ್ತಿ ಎ ಜೆ ದೇಸಾಯಿ ಮತ್ತು ವಿ ಜಿ ಅರುಣ್ ಅವರಿದ್ದ ಪೀಠ ಈ ವಿಚಾರ ಪರಿಶೀಲಿಸುವುದಾಗಿ ತಿಳಿಸಿತು.

ಹೊಸ ಕಾನೂನುಗಳನ್ನು ಈ ರೀತಿ ಹೆಸರಿಸುವುದು ಸಂಸತ್ತು ಅಂಗೀಕರಿಸಿದ ಎಲ್ಲಾ ಕಾಯಿದೆ ಮತ್ತು ಮಸೂದೆಗಳು ಇಂಗ್ಲಿಷ್‌ನಲ್ಲಿರಬೇಕು ಎಂದು ಕಡ್ಡಾಯಗೊಳಿಸುವ ಸಂವಿಧಾನದ 348 ನೇ ವಿಧಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರಾದ ವಕೀಲ ಪಿ.ವಿ. ಜೀವೇಶ್ ಆಕ್ಷೇಪಿಸಿದ್ದಾರೆ.

ವಿಚಾರಣೆ ವೇಳೆ ನ್ಯಾ. ಅರುಣ್‌ ಅವರು, "348ನೇ ವಿಧಿಯು ಅಧಿಕೃತ ಪಠ್ಯವು ಇಂಗ್ಲಿಷ್‌ನಲ್ಲಿರಬೇಕು ಎಂದು ಹೇಳುತ್ತದೆ. ಇದು ಶೀರ್ಷಿಕೆಯನ್ನೂ ಒಳಗೊಳ್ಳುತ್ತದೆಯೇ?" ಎಂದು ಮೌಖಿಕವಾಗಿ ಪ್ರಶ್ನಿಸಿದರು.

ನ್ಯಾಯಾಲಯವು ಕೇಳಿದ ಪ್ರಶ್ನೆಗೆ, ಜೀವೇಶ್ ಅವರು "ಅಧಿಕೃತ" ಪದದ ನಿಘಂಟಿನ ವ್ಯಾಖ್ಯಾನವು ಅಧಿಕೃತ ಪ್ರಾಧಿಕಾರದಿಂದ ಅಂಗೀಕರಿಸಲ್ಪಟ್ಟ ವಿಷಯ ಎನ್ನುವುದಾಗಿದ್ದು ಈ ವಿಷಯದಲ್ಲಿ ಅದು ಕಾಯಿದೆಗಳ ಶೀರ್ಷಿಕೆಗಳನ್ನೂ ಒಳಗೊಂಡಿರುತ್ತದೆ ಎಂದರು.

ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿದಾಗ, ಜೀವೇಶ್ ಅವರು ಬಳಸಿರುವ ವರ್ಣಮಾಲೆ ಮಾತ್ರ ಇಂಗ್ಲಿಷನಲ್ಲಿದೆ ಆದರೆ ಭಾಷೆಯಲ್ಲ ಎಂದು ಪ್ರತಿವಾದಿಸಿದರು.

ಪ್ರಕರಣವನ್ನು ವಿವರವಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು ಜುಲೈ 26 ಕ್ಕೆ ಪ್ರಕರಣ ಮುಂದೂಡಿತು.

ಹೊಸ ಅಪರಾಧಿಕ ಕಾನೂನುಗಳ ನಾಮಕರಣ ಹಿಂದಿ ಪ್ರಥಮ ಭಾಷೆಯಾಗಿರದ ದಕ್ಷಿಣ ಭಾರತ ಸೇರಿದಂತೆ ಉಳಿದ ಭಾಗಗಳ ವಕೀಲರಿಗೆ ಗೊಂದಲ ಹಾಗೂ ತೊಂದರೆ ಉಂಟು ಮಾಡುತ್ತದೆ. ಹಿಂದಿ ಅಥವಾ ಸಂಸ್ಕೃತ ಮಾತನಾಡದವರಿಗೆ ಅವುಗಳ ಉಚ್ಚರಣೆಯೂ ಕಷ್ಟ. ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಕಾಯಿದೆ, ಮಸೂದೆಗಳು ಇತ್ಯಾದಿಗಳಲ್ಲಿ ಬಳಸಬೇಕಾದ ಭಾಷೆಗೆ ಸಂಬಂಧಿಸಿದ 348(1)(ಬಿ) ವಿಧಿಗೆ ಇದು ವ್ಯತಿರಿಕ್ತವಾಗಿದೆ ಎಂದು ಜೀವೇಶ್‌ ತಮ್ಮ ಮನವಿಯಲ್ಲಿ ವಾದಿಸಿದ್ದಾರೆ.

ವೈವಿಧ್ಯಮಯ ಭಾಷಾ ಗುಂಪುಗಳ ನಡುವೆ ಏಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ವಿಧಿಯನ್ನು ಜಾರಿಗೊಳಿಸಲಾಗಿತ್ತು. ಆದ್ದರಿಂದ, ಹೊಸ ಕ್ರಿಮಿನಲ್ ಕಾನೂನುಗಳನ್ನು ಹಿಂದಿಯಲ್ಲಿ ಹೆಸರಿಸುವುದು ಭಾಷಾ ಸಾಮ್ರಾಜ್ಯಶಾಹಿಯೇ ಹೊರತು ಬೇರೇನೂ ಅಲ್ಲ. ಇದು ಪ್ರಜಾಪ್ರಭುತ್ವದ ಮೌಲ್ಯ, ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿದೆ. ಹೊಸ ಕಾನೂನುಗಳಿಗೆ ಇಂಗ್ಲಿಷ್ ಹೆಸರುಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು. ಇಂಗ್ಲಿಷ್ ಹೊರತುಪಡಿಸಿ ಯಾವುದೇ ಭಾಷೆಯಲ್ಲಿ ಯಾವುದೇ ಕಾನೂನನ್ನು ಶೀರ್ಷಿಕೆ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ ಎಂದು ಜೀವೇಶ್‌ ಪ್ರತಿಪಾದಿಸಿದ್ದಾರೆ.

Kannada Bar & Bench
kannada.barandbench.com