ಶ್ವಾನ, ಬೆಕ್ಕು ಮನುಷ್ಯರಲ್ಲ: ಆಕಸ್ಮಿಕವಾಗಿ ನಾಯಿ ಕೊಂದವನ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ಐಪಿಸಿ ನಿಯಮಾವಳಿಗಳಡಿ ವೇಗದ ಚಾಲನೆ, ಪ್ರಾಣಾಪಾಯ ಉಂಟುಮಾಡುವಂತಹ ಅಪರಾಧಗಳು ಪ್ರಾಣಿಗಳು ಬಲಿಪಶುವಾಗುವ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ ಎಂದ ಪೀಠ.
Swiggy
Swiggy Image for representative purpose
Published on

ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಪ್ರಾಣಿಗಳ ಜೀವಕ್ಕೆ ಹಾನಿಯುಂಟು ಮಾಡಿದರೆ ಅದು ಐಪಿಸಿ ನಿಯಮಾವಳಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. ಆ ಮೂಲಕ ಆಹಾರ ಪೊಟ್ಟಣ ವಿತರಿಸುವ ವೇಳೆ ಆಕಸ್ಮಿಕವಾಗಿ ನಾಯಿಯ ಸಾವಿಗೆ ಕಾರಣನಾದ ಸ್ವಿಗ್ಗಿ ಡೆಲಿವರಿ ಬಾಯ್‌ ಒಬ್ಬರ ವಿರುದ್ಧ ಹೂಡಲಾಗಿದ್ದ ಎಫ್‌ಐಆರ್‌ ಅನ್ನು ಅದು ರದ್ದುಗೊಳಿಸಿದೆ [ಮಾನಸ್ ಮಂದಾರ್‌ ಗೋಡ್ಬೋಲೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಪ್ರಾಣಿ ಪ್ರಿಯರು ಸಾಕುಪ್ರಾಣಿಗಳನ್ನು ತಮ್ಮ ಮಗುವಿನಂತೆ ಪರಿಗಣಿಸುತ್ತಾರಾದರೂ ಅವು ಮನುಷ್ಯರಲ್ಲ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠ ಹೇಳಿತು.  

"ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತೆ ಯಾವುದೇ ವಾಹನವನ್ನು ಓಡಿಸುವವರ ಬಗ್ಗೆ ಸೆಕ್ಷನ್ 279 ಹೇಳಿದರೆ, ಸೆಕ್ಷನ್ 337 ಮಾನವನ ಜೀವಕ್ಕೆ ಅಪಾಯವನ್ನುಂಟುಮಾಡುವ ಬಗ್ಗೆ ಮಾತನಾಡುತ್ತದೆ. ನಿಸ್ಸಂದೇಹವಾಗಿ, ನಾಯಿ/ಬೆಕ್ಕನ್ನು ಅದರ ಮಾಲೀಕರು ಮಗುವಿನಂತೆ ಅಥವಾ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತಾರಾದರೂ ಮೂಲ ಜೀವಶಾಸ್ತ್ರದ ಪ್ರಕಾರ ಅವು ಮನುಷ್ಯರಲ್ಲ ಎಂದು ನಮಗೆ ತಿಳಿದುಬರುತ್ತದೆ, ಸೆಕ್ಷನ್ 279 ಮತ್ತು 337 ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಇಲ್ಲವೇ ಯಾವುದೇ ವ್ಯಕ್ತಿಗೆ ಗಾಯ ಅಥವಾ ಘಾಸಿ ಉಂಟುಮಾಡುವ ಕ್ರಿಯೆಗಳಿಗೆ ಸಂಬಂಧಿಸಿದೆ” ಎಂದು ಪೀಠ  ಡಿಸೆಂಬರ್ 20ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

Also Read
[ಕೇರಳ ಬೀದಿನಾಯಿ ಪ್ರಕರಣ] ನಮ್ಮಲ್ಲಿ ಬಹುತೇಕರು ಶ್ವಾನಪ್ರಿಯರು ಆದರೆ ದಾಳಿಕೋರ ನಾಯಿಗಳನ್ನು ದೂರ ಇಡಬೇಕು: ಸುಪ್ರೀಂ

ಹೀಗಾಗಿ, ಅಪರಾಧ ನಿಗದಿಪಡಿಸಲು ಅಗತ್ಯ ಅಂಶ ಇಲ್ಲದೇ ಇರುವುದರಿಂದ ಈ ಪ್ರಕರಣಕ್ಕೆ ಐಪಿಸಿಯ ನಿಬಂಧನೆಗಳನ್ನು ಅನ್ವಯಿಸಲು ಆಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"ಹೇಳಿರುವ ಸೆಕ್ಷನ್‌ಗಳು ಮಾನವನಿಗೆ ಹೊರತಾಗಿ ಉಂಟಾಗುವ ಯಾವುದೇ ಘಾಸಿಯನ್ನು ಮಾನ್ಯ ಮಾಡುವುದಿಲ್ಲ ಮತ್ತು ಅದನ್ನು ಅಪರಾಧ ಎನ್ನುವುದಿಲ್ಲ.  ಹೀಗಾಗಿ, ಸಾಕುಪ್ರಾಣಿಗಳಿಗೆ / ಪ್ರಾಣಿಗಳಿಗೆ ಉಂಟಾಗುವ ಗಾಯ/ಸಾವಿಗೆ ಸಂಬಂಧಿಸಿದಂತೆ, ಐಪಿಸಿ ಸೆಕ್ಷನ್ 279 ಮತ್ತು 337 ರ ಅಡಿಯಲ್ಲಿ ಅಪರಾಧ ನಿಗದಿಪಡಿಸಲಾಗದು” ಎಂದು ಪೀಠ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಆರೋಪಿಸಿದಂತೆ ಅರ್ಜಿದಾರರು ಯಾವುದೇ ಅಪರಾಧ ಮಾಡಿಲ್ಲ ಮತ್ತು ಎಫ್‌ಐಆರ್‌ ಕಾನೂನಿನಡಿ ಉಳಿಯದು ಎಂದು ನ್ಯಾಯಾಲಯ ಹೇಳಿತು. ಜೊತೆಗೆ ಎಫ್‌ಐಆರ್‌ ದಾಖಲಿಸಿದ್ದಕ್ಕಾಗಿ ಪೊಲೀಸರ ವಿರುದ್ಧವೂ ಅದು ಕೆಂಗಣ್ಣು ಬೀರಿತು. ಯಾವುದೇ ಅಪರಾಧವನ್ನು ವಿಷದಪಡಿಸದೆ ಪ್ರಾಸಿಕ್ಯೂಷನ್‌ ಕ್ರಮಕ್ಕೆ ಮುಂದಾದ ಪೊಲೀಸರಿಂದ ಅರ್ಜಿದಾರರಿಗೆ ಉಂಟಾದ ಕ್ಷೋಭೆಯನ್ನು ಪರಿಗಣಿಸಿ ಸರ್ಕಾರವು ಅರ್ಜಿದಾರರಿಗೆ ₹20,000 ಪಾವತಿಸಲು ನ್ಯಾಯಾಲಯವು ಸೂಚಿಸಿತು. ಅಲ್ಲದೆ, ಆ ಹಣವನ್ನು ಎಫ್‌ಐಆರ್‌ ದಾಖಲಿಸಿದ ಹಾಗೂ ಆರೋಪಪಟ್ಟಿ ದಾಖಲಿಸಲು ಅನುಮತಿಸಿದ ಅಧಿಕಾರಿಗಳಿಂದ ವಸೂಲು ಮಾಡಿಕೊಳ್ಳಲು ಸೂಚಿಸಿತು.

“…ಕಾನೂನಿನ ಪಾಲಕರಾದ ಪೊಲೀಸರು ಎಫ್‌ಐಆರ್‌ ದಾಖಲಿಸುವಾಗ ನಂತರ ದೋಷಾರೋಪ ಪಟ್ಟಿ ಸಲ್ಲಿಸುವಾಗ ಹೆಚ್ಚು ಜಾಗರೂಕರಾಗಿರಬೇಕು” ಎಂದ ಪೀಠ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿತು.

ಅರ್ಜಿದಾರ ಸ್ವಿಗ್ಗಿ ಡೆಲಿವರಿ ಬಾಯ್‌ ಮುಂಬೈನ ಮರೀನ್‌ ಡ್ರೈವ್‌ ಸಮೀಪ ಆಹಾರ ವಿತರಿಸಲು ಬೈಕ್‌ನಲ್ಲಿ ತೆರಳಿದ್ದ ವೇಳೆ, ಬೀದಿ ನಾಯಿಯೊಂದು ಅಡ್ಡಬಂದ ಪರಿಣಾಮ ಢಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ ಅರ್ಜಿದಾರ ಬಿದ್ದು ಗಾಯಗೊಂಡರೆ, ನಾಯಿಯು ಗಾಯಗೊಂಡು ಕೆಲ ಸಮಯದ ನಂತರ ಮೃತಪಟ್ಟಿತ್ತು. ಘಟನೆಯ ಬಗ್ಗೆ ಆ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಅಹಾರ ನೀಡುವ ಹವ್ಯಾಸವುಳ್ಳ ದೂರುದಾರರು ದೂರು ದಾಖಲಿಸಿದ್ದರು. ಅರ್ಜಿದಾರರ ಅಜಾಗರೂಕ ಚಾಲನೆ ಘಟನೆಗೆ ಕಾರಣ ಎಂದು ದೂರು ದಾಖಲಿಸಲಾಗಿತ್ತು. ಆದರೆ, ಅರ್ಜಿದಾರರು ವೇಗಮಿತಿಯನ್ನು ಮೀರಿದ ಬಗ್ಗೆಯಾಗಲಿ, ಅಜಾಗರೂಕತೆಯಿಂದ ಚಾಲನೆ ಮಾಡಿದ ಬಗ್ಗೆಯಾಗಲಿ ನಿರೂಪಿಸಲು ಸಾಧ್ಯವಾಗಿರಲಿಲ್ಲ.

Kannada Bar & Bench
kannada.barandbench.com