ವಕೀಲ ವೃತ್ತಿಯಲ್ಲಿ ಮಹಿಳೆಯರ ಬೆಳವಣಿಗೆಯನ್ನು ತಡೆಯುವ ಗಾಜಿನ ಛಾವಣಿ ಇರುವುದು ನಿಜ ಎಂದಿರುವ ಸುಪ್ರೀಂ ಕೋರ್ಟ್ ನ್ಯಾ. ಎಸ್ ರವೀಂದ್ರ ಭಟ್ ಅವರು, ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಕಳವಳಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮದ್ರಾಸ್ ಹೈಕೋರ್ಟ್‌ನಲ್ಲಿ ಅತ್ಯಧಿಕ ಮಹಿಳಾ ನ್ಯಾಯಮೂರ್ತಿಗಳಿದ್ದರೂ ಆ ಸಂಖ್ಯೆ ಅಪೇಕ್ಷಿತ ಸಾಮರ್ಥ್ಯಕ್ಕೆ ಹತ್ತಿರ ಇಲ್ಲ ಎಂದು ಅವರು ವಿವರಿಸಿದರು.
ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಪಿಎಚ್‌ಡಿಸಿಸಿಐ) ಶನಿವಾರ ನವದೆಹಲಿಯಲ್ಲಿ ಆಯೋಜಿಸಿದ್ದ ʼಅಧಿಕಾರದಲ್ಲಿ ಮಹಿಳೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆʼ ಕುರಿತ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮಾತನಾಡಿದರು.
ಮನೆಗೆಲಸ ಕೂಡ ಮಹಿಳೆಯರು ಜವಾಬ್ದಾರಿಯುತ ಸ್ಥಾನಗಳಿಗೆ ಏರಲು ಅಡ್ಡಿಯಾಗುತ್ತದೆ ಎಂಬುದನ್ನು ಅವರು ವಿವರಿಸಿದರು. ʼವರ್ಕ್ ಫ್ರಂ ಹೋಮ್” ಸಂಭವನೀಯ ಪರಿಹಾರ ಆಗಬಹುದಾಗಿತ್ತಾದರೂ ಮನೆಗೆಲಸ ಎಂಬುದು ಮಹಿಳೆ ಮತ್ತು ಪುರುಷನ ನಡುವೆ ಸಮಾನವಾಗಿ ಹಂಚಿಕೆಯಾಗದೆ ಇರುವುದರಿಂದ ಅದು ಕೂಡ ಮಹಿಳೆಯರಿಗೆ ಹೊರೆಯಾಗಿ ಪರಿಣಮಿಸಿದೆ. ಇದು ಕೆಲಸ ಹಾಗೂ ಮನೆಯ ಬದುಕಿನ ನಡವಿನ ಗೆರೆ ಮಸುಕಾಗಿಸುವ ಮೂಲಕ ಮಹಿಳೆಯರಿಗೆ ತಡೆಯುಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಮಹಿಳೆಯರ ಮೇಲೆ ಅಸಮಾನ ಹೊರೆಯಾಗಿರುವ ಮನೆಗೆಲಸದ ನಿರೀಕ್ಷೆಗಳನ್ನು ಅನಿವಾರ್ಯ ಎಂದು ಪರಿಗಣಿಸಲಾಗದು. ಬದಲಿಗೆ ಅಂತಹ ದುಡಿಮೆಯನ್ನು ಹೆಚ್ಚು ಸಮಾನವಾದ ವಿಭಜನೆಯಾಗಿ ಗುರುತಿಸುವ ಮತ್ತು ಆದ್ಯತೆ ನೀಡುವ ಸಮಾಜವಾಗಿ ಪ್ರಗತಿಶೀಲವಾಗುವ ಯತ್ನಗಳು ನಡೆಯಬೇಕು” ಎಂದು ಅವರು ಹೇಳಿದರು.