ಜಾಮೀನು ಪ್ರಕರಣಗಳನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೆಳ ನ್ಯಾಯಾಲಯಗಳಿಗೆ ತಿಳಿಹೇಳಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಳಂಬವಿಲ್ಲದೆ ಇತ್ಯರ್ಥಗೊಳಿಸುವಂತೆ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ದೆಹಲಿ ಹೈಕೋರ್ಟ್‌ಗೆ ಸೂಚಿಸಿತು.
ಜೈನ್ ಅವರ ಪರ ವಾದ ಮಂಡಿಸಿದ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅರ್ಜಿಯನ್ನು ರಜಾಕಾಲದ ಕಾರಣಕ್ಕಾಗಿ ಆರು ವಾರಗಳ ಕಾಲ ಮುಂದೂಡಲಾಯಿತು. ಹಿಂದೆಲ್ಲಾ ಇಂತಹ ಪ್ರಕರಣಗಳನ್ನು ಒಂದು ವಾರದೊಳಗೆ ವಿಚಾರಣೆ ನಡೆಸಲಾಗುತ್ತಿತ್ತು ಎಂದರು.
ಆಗ ವಿಚಾರಣೆ ಬೇಗ ನಡೆಯುವಂತೆ ಹೈಕೋರ್ಟ್ ನೋಡಿಕೊಳ್ಳಲಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿತು.
ಆದರೆ, ಪ್ರಕರಣ ಸುಪ್ರೀಂ ಕೋರ್ಟ್‌ನಿಂದ ವಿಚಾರಣೆಗೆ ಒಳಪಡಬೇಕಾದ ಕಾನೂನಿನ ಪ್ರಮುಖ ಪ್ರಶ್ನೆಯನ್ನು ಒಳಗೊಂಡಿದೆ ಎಂಬ ಜೈನ್ ಅವರ ಮನವಿಯನ್ನು ಇದೇ ವೇಳೆ ಪೀಠ ತಿರಸ್ಕರಿಸಿತು.
ಹೈಕೋರ್ಟ್ ಇನ್ನೂ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ಮುಂದೂಡಿಕೆ ಆದೇಶ ಪ್ರಶ್ನಿಸಿರುವ ವಾದಕ್ಕೆ ಅರ್ಹತೆ ಇಲ್ಲ. ಹೈಕೋರ್ಟ್ ತೀರ್ಪು ನೀಡಿದ ಬಳಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದ ನ್ಯಾಯಾಲಯ ವಿಚಾರಣೆಯನ್ನು ವಿಳಂಬ ಮಾಡದಂತೆ ಹೈಕೋರ್ಟ್‌ಗೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತು.
ದೆಹಲಿ ಹೈಕೋರ್ಟ್ ತನ್ನ ಡಿಫಾಲ್ಟ್ ಜಾಮೀನು ಅರ್ಜಿಯನ್ನು ದೀರ್ಘಾವಧಿಗೆ ಮುಂದೂಡಿರುವುದನ್ನು ಪ್ರಶ್ನಿಸಿ ಜೈನ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮೇ 28ರಂದು ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ್ದ ಹೈಕೋರ್ಟ್, ಜುಲೈ 9ಕ್ಕೆ ಪ್ರಕರಣ ಮುಂದೂಡಿತ್ತು.
ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜೈನ್ ಅವರನ್ನು 2022ರ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿತ್ತು.