
“ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕಿ, ಮೂಕ ಪ್ರೇಕ್ಷರಾಗಬೇಡಿ” ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಚಾಟಿ ಬೀಸಿತು.
ಹಾಲಿ ಮತ್ತು ಮಾಜಿ ಸಚಿವರು ಹಾಗೂ ಶಾಸಕರ ಪ್ರಕರಣಗಳ ವಿಚಾರಣೆಯ ರೋಸ್ಟರ್ ಹೊಂದಿರುವ ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠವು ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.
ವಿಚಾರಣೆಯ ವೇಳೆ ಅರ್ಜಿದಾರರ ಪರ ಹಲವು ವಕೀಲರು ಮಧ್ಯಂತರ ಆದೇಶ ಮುಂದುವರಿಸುವಂತೆ ಕೋರುತ್ತಿದ್ದರು. ಇದನ್ನು ಪರಿಗಣಿಸಿದ ಪೀಠವು ಸರ್ಕಾರದ ವಕೀಲರನ್ನು ಕುರಿತು “ಯಾವೆಲ್ಲಾ ಪ್ರಕರಣಗಳಲ್ಲಿ ಮಧ್ಯಂತರ ತಡೆಯಾಜ್ಞೆ ಇದೆಯೋ ಅವುಗಳನ್ನು ತೆರವು ಮಾಡುವ ಸಂಬಂಧ ಅರ್ಜಿ ಹಾಕಿ. ಮೂಕ ಪ್ರೇಕ್ಷಕರಾಗಬೇಡಿ” ಎಂದು ಮೌಖಿಕವಾಗಿ ಚಾಟಿ ಬೀಸಿತು.
ಜೂನ್ 26ರಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಸರ್ಕಾರವು ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಪ್ರಕರಣಗಳಲ್ಲಿಯೂ ಸರ್ಕಾರದ ಪರ ಆದೇಶ ಬರುತ್ತಿಲ್ಲ ಯಾಕೆ? ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಯಾಕೆ ಸುಲಭವಾಗಿ ತಡೆಯಾಜ್ಞೆ ದೊರೆಯುತ್ತದೆ? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇರುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.