

“ರೀಲ್ಸ್ ಮತ್ತು ಫೇಸ್‌ಬುಕ್ ಪೋಸ್ಟ್‌ಗಾಗಿ ಹಲ್ಲೆ ಮಾಡುವುದು ಅಥವಾ ಪೊಲೀಸರನ್ನು ನಿಂದಿಸುವುದು ಸಲ್ಲ” ಎಂದು ಪುನೀತ್ ಕೆರೆಹಳ್ಳಿಯ ವಿರುದ್ಧ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಅವರ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಗೆ ತಡೆ ನೀಡಿದೆ.
ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ರದ್ದತಿ ಕೋರಿ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪಿ ಎನ್ ಮನಮೋಹನ್ ಅವರು “ಪ್ರಕರಣ ದಾಖಲಿಸಿ, ಪುನೀತ್‌ಗೆ ಅಂತಿಮ ನೋಟಿಸ್ ಅನ್ನು ಜನವರಿ 13ರಂದು ನೀಡಿ, ಜನವರಿ 16ರಂದು ಹಾಜರಾಗಲು ಸೂಚಿಸಲಾಗಿದೆ. ಆದರೆ, ಮಾರನೇಯ ದಿನ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪುನೀತ್‌ಗೆ ತನ್ನ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ” ಎಂದರು.
ಆಗ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಬೇರೊಂದು ಪ್ರಕರಣದಲ್ಲಿ ಜಾಮೀನು ಸಂಬಂಧ ಬಾಂಡ್ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ಪುನೀತ್ ಪಾಲಿಸಿಲ್ಲ. ಈ ಸಂಬಂಧ ಸಮನ್ವಯ ಪೀಠ ಆದೇಶ ಮಾಡಿದೆ. ಅದಕ್ಕಾಗಿ ಪುನೀತ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ಹಾಜರಾಗಿ ಹೇಳಿಕೆ ನೀಡಲಿ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳವುದಿಲ್ಲ” ಎಂದರು.
“ಸೋಲದೇವಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧದ ಪ್ರಕರಣಗಳಿಗೆ ತಡೆ ನೀಡಿದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಗಳನ್ನು ಪೀಠದ ಮುಂದೆ ಇಡಲಾಗುವುದು” ಎಂದರು. ಅದಕ್ಕೆ ಪೀಠವು ಪುನೀತ್ ಕುರಿತು “ಮತ್ತೆ ಗಲಾಟೆ ಮಾಡಿದ್ದೀರಾ? ಪುನೀತ್‌ಗೆ ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ನೀವು ಹಾಗೆ ಮಾಡಲು ಹೇಗೆ ಸಾಧ್ಯ. ಯಾಕೆ ಹೀಗೆಲ್ಲಾ ಮಾಡುತ್ತೀರಿ? ಎಚ್ಚರಿಕೆ ಇರಬೇಕಲ್ಲವೇ? ನಿಮ್ಮ ವಿರುದ್ಧ ಪ್ರಕರಣ ವಜಾ ಮಾಡಲಾಗಿಲ್ಲ, ತಡೆ ನೀಡಲಾಗಿದೆಯಷ್ಟೆ” ಎಂದಿತು.
ಅದಕ್ಕೆ ಪುನೀತ್ ಪರ ವಕೀಲ ಪಿ ಎನ್ ಮನಮೋಹನ್ ಅವರು “ಪುನೀತ್‌ಗೆ ಸಲಹೆ ನೀಡಲಾಗುವುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದರು.
ಆನಂತರ ಪೀಠವು “ಅಕ್ರಮ ವಲಸಿಗರಿಗೆ ವಿಚಾರವನ್ನು ಪುನೀತ್ ಎತ್ತಿದ್ದು, ಸರ್ಕಾರ ಕ್ರಮಕೈಗೊಳ್ಳುತ್ತಿದೆ. ವಿಚಾರವನ್ನು ಬಿಂಬಿಸುವ ರೀತಿಯಲ್ಲಿ ಬಿಂಬಿಸಬೇಕು” ಎಂದಿತು.
ಆಗ ಜಗದೀಶ್ ಅವರು “ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಲ್ಲಿ ಏನು ಕ್ರಮಕೈಗೊಳ್ಳಲಾಗಿದೆ ಎಂಬುದರ ವರದಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮಕೈಗೊಂಡಿದೆ. ಸರ್ಕಾರ ಕ್ರಮಕೈಗೊಂಡಿಲ್ಲ ಎಂಬುದನ್ನು ಪುನೀತ್ ತೋರಿಸಲಿ. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು” ಎಂದರು.
ಇದಕ್ಕೆ ಪೀಠವು “ದೂರು ನೀಡಿ, ಸರ್ಕಾರ ಕ್ರಮಕೈಗೊಳ್ಳದಿದ್ದರೆ ನೋಡೋಣ. ರೀಲ್ಸ್ ಮತ್ತು ಫೇಸ್‌ಬುಕ್ ಪೋಸ್ಟ್‌ಗೆ ಇದೆಲ್ಲವನ್ನೂ ಮಾಡಬಾರದು. ಪುನೀತ್ ಎಚ್ಚರಿಕೆ ವಹಿಸಬೇಕು” ಎಂದಿತು.
ಅಂತಿಮವಾಗಿ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಗೆ ತಡೆ ನೀಡಲಾಗಿದೆ. ಎರಡು ವಾರದಲ್ಲಿ ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಒದಗಿಸಬೇಕು ಮತ್ತು ಅವರ ಮುಂದೆ ಪುನೀತ್ ಹಾಜರಾಗಿ ಹೇಳಿಕೆ ದಾಖಲಿಸಬೇಕು. ಇಲ್ಲವಾದಲ್ಲಿ ಈಗ ನೀಡಿರುವ ಮಧ್ಯಂತರ ಆದೇಶವು ಸ್ವಯಂಚಾಲಿತವಾಗಿ ರದ್ದಾಗಲಿದೆ. ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಬಾರದು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.