ಹೈಕೋರ್ಟ್ ನೀಡಿದ ಜಾಮೀನು ಆದೇಶ, ಮಧ್ಯಂತರ ಆದೇಶಗಳ ಪ್ರಮಾಣೀಕೃತ ಪ್ರತಿಗಾಗಿ ದಾವೆದಾರರಿಗೆ ಒತ್ತಾಯಿಸದಂತೆ ರಾಜ್ಯದ ಎಲ್ಲಾ ನ್ಯಾಯಾಂಗ ಅಧಿಕಾರಿಗಳಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ತಿಳಿಸಿದೆ.
ಹೀಗೆ ಒತ್ತಾಯಿಸುವುದು ದಾವೆದಾರರಿಗೆ ಅನಾನುಕೂಲ ಉಂಟು ಮಾಡಿ, ತೊಂದರೆಗೆ ಕಾರಣವಾಗುತ್ತದೆ ಎಂದಿರುವ ನ್ಯಾಯಾಲಯ ಬದಲಿಗೆ ಅಂತಹ ಆದೇಶಗಳ ಡೌನ್‌ಲೋಡ್ ಮಾಡಿದ ಪ್ರತಿಗಳನ್ನು ಸಲ್ಲಿಸಲು ದಾವೆದಾರರು/ವಕೀಲರಿಗೆ ಅನುಮತಿಸಬೇಕು. ಅಂತಹ ಪ್ರತಿಗಳನ್ನು ನಿಜವಾಗಿಯೂ ಡೌನ್‌ಲೋಡ್ ಮಾಡಲಾಗಿದೆ ಎಂದು ಕಕ್ಷಿದಾರರನ್ನು ಪ್ರತಿನಿಧಿಸುವ ವಕೀಲರು ದೃಢೀಕರಿಸಿದರೆ ಸಾಕು ಎಂದು ಹೈಕೋರ್ಟ್ ಹೇಳಿದೆ.
ಇಂತಹ ಪ್ರತಿಗಳನ್ನು ಸ್ವೀಕರಿಸುವಾಗ ಹೈಕೋರ್ಟ್ ಜಾಲತಾಣವನ್ನೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಇದೇ ವೇಳೆ ನ್ಯಾಯಾಲಯ ತಿಳಿಸಿದೆ.
ಜೂನ್ 3ರಂದು ಶಿಮ್ಲಾದಲ್ಲಿರುವ ಹೈಕೋರ್ಟ್‌ನ ರಿಜಿಸ್ಟ್ರಾರ್ (ವಿಜಿಲೆನ್ಸ್), ಜೆಕೆ ಶರ್ಮಾ ಅವರು ಈ ಕುರಿತು ಪತ್ರ ಬರೆದಿದ್ದಾರೆ.
ವಿಚಾರಣಾ ನ್ಯಾಯಾಲಯಗಳ ಅಧಿಕಾರಿಗಳು ಆದೇಶಗಳ ದೃಢೀಕೃತ ನಕಲುಗಳನ್ನು ಒತ್ತಾಯಿಸುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದ ನಂತರ ಈ ಆಡಳಿತಾತ್ಮಕ ನಿರ್ದೇಶನ ನೀಡಲಾಗಿದೆ.
ಪತ್ರವನ್ನು ಇಲ್ಲಿ ಓದಿ: