ಸಾರ್ವಜನಿಕ ಹಿತಾಸಕ್ತಿ ಮನವಿಗಳ ನಿಯಮ ಪಾಲಿಸದ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಬಾರದು: ಹೈಕೋರ್ಟ್‌

ಕೃಷ್ಣ ಭಾಗ್ಯ ಜಲ ನಿಗಮವು ಕರೆದಿದ್ದ ಅಲ್ಪಾವಧಿ ಟೆಂಡರ್‌ವೊಂದನ್ನು ಪ್ರಶ್ನಿಸಿ ರಾಯಚೂರಿನ ಮುದ್ಗಲ್ ನಿವಾಸಿ ಡಿ ಬಸವರಾಜ್ ಅರ್ಜಿ ಸಲ್ಲಿಸಿದ್ದರು.
Karnataka High Court
Karnataka High Court
Published on

ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ನಿಯಮಗಳನ್ನು ಪಾಲಿಸದ ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.

ಕೃಷ್ಣ ಭಾಗ್ಯ ಜಲ ನಿಗಮವು ಕರೆದಿದ್ದ ಅಲ್ಪಾವಧಿ ಟೆಂಡರ್‌ವೊಂದನ್ನು ಪ್ರಶ್ನಿಸಿ ರಾಯಚೂರಿನ ಮುದ್ಗಲ್ ನಿವಾಸಿ ಡಿ ಬಸವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೃಷ್ಣ ಜಲಭಾಗ್ಯ ನಿಗಮವು ಕರೆದಿರುವ ಟೆಂಡರ್‌ನಲ್ಲಿ ಗುತ್ತಿಗೆ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಮನವಿ ಸಲ್ಲಿಸಲಾಗಿತ್ತು. ಆದರೆ, ಗುತ್ತಿಗೆ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ಅರ್ಜಿ ನಿಷ್ಟ್ರಯೋಜಕವಾಗಿದ್ದು, ವಿಚಾರಣೆಗೆ ಯೋಗ್ಯವಾಗಿಲ್ಲ. ಮೇಲಾಗಿ ಇದೊಂದು ಪಿಐಎಲ್ ಆಗಿದ್ದು, ಕರ್ನಾಟಕ ಹೈಕೋರ್ಟ್‌ನ ಪಿಐಎಲ್ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.

ಅಲ್ಲದೇ, ಹೈಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮನವಿಗಳಲ್ಲಿ ಕಡ್ಡಾಯವಾಗಿ ಕರ್ನಾಟಕ ಹೈಕೋರ್ಟ್ ಅಧಿನಿಯಮಗಳನ್ನು ಪಾಲನೆ ಮಾಡಬೇಕು. ಎಲ್ಲಾ ನಿಯಮಗಳನ್ನು ಪಾಲನೆ ಮಾಡದಿದ್ದರೆ, ಅಂತಹ ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಬಾರದು ಎಂದು ರಿಜಿಸ್ಟ್ರಿಗೆ ನ್ಯಾಯಾಲಯ ನಿರ್ದೇಶಿಸಿದೆ.

Kannada Bar & Bench
kannada.barandbench.com