ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ರೋಗಿಗಳಿಗೆ ತೊಂದರೆಯಾಗದಂತೆ ಕೆಲಸ ಪುನರಾರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಪುನರುಚ್ಚರಿಸಿತು.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳಿಗೆ ಬುದ್ಧಿಮಾತು ಹೇಳಿರುವ ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಘಟನೆಯನ್ನು ರಾಜಕೀಯಗೊಳಿಸಬಾರದು ಎಂದಿದೆ.
ವೈದ್ಯರು ಕೂಡಲೇ ಕರ್ತವ್ಯಕ್ಕೆ ಮರಳಿದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಹೇಳಲಾಗುವುದು ಎಂದು ನ್ಯಾಯಾಲಯ ತಿಳಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆ ವೇಳೆ ಕೂಡ ನ್ಯಾಯಾಲಯ ವೈದ್ಯರು ಕರ್ತವ್ಯಕ್ಕೆ ಮರಳಬೇಕೆಂದು ಕೇಳಿಕೊಂಡಿತ್ತು.
ನಾಗಪುರದ ಪ್ರತಿಭಟನಾ ನಿರತ ಏಮ್ಸ್ ಸ್ಥಾನಿಕ ವೈದ್ಯರಿಗೆ ದಂಡ ವಿಧಿಸಲಾಗುತ್ತಿದೆ ಎಂದು ವಕೀಲರೊಬ್ಬರು ತಿಳಿಸಿದಾಗ ಕರ್ತವ್ಯಕ್ಕೆ ಹಾಜರಾಗದಿದ್ದರೆ ಆಡಳಿತ ಮಂಡಳಿಗೆ ತಾನು ಏನು ಹೇಳಲು ಸಾಧ್ಯ ಎಂದು ನ್ಯಾಯಲಯ ಪ್ರಶ್ನಿಸಿತು. ಆಗ ನ್ಯಾಯಾಲಯ ಸೌಮ್ಯ ದೃಷ್ಟಿಕೋನ ತಳೆಯಬೇಕೆಂದು ಕೋರಿದ ವಕೀಲರು ಶೀಘ್ರವೇ ವೈದ್ಯರು ಕರ್ತವ್ಯಕ್ಕೆ ಮರಳಲಿದ್ದಾರೆ, ಕೆಲವರು ಈಗಾಗಲೇ ಮರಳಿದ್ದಾರೆ ಎಂದರು.
ಕೆಲಸ ಆರಂಭಿಸಿದ ಬಳಿಕವೂ ವೈದ್ಯರನ್ನು ಗುರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಚಂಡೀಗಢದ ವೈದ್ಯರನ್ನು ಪ್ರತಿನಿಧಿಸುವ ವಕೀಲರು ತಿಳಿಸಿದಾಗ ಪುನರಾರಂಭಿಸುವ ವೈದ್ಯರಿಗೆ ದಂಡ ವಿಧಿಸದಂತೆ ನಿರ್ದೇಶನ ನೀಡುವುದಾಗಿ ನ್ಯಾಯಾಲಯ ಭರವಸೆ ನೀಡಿತು.
ನ್ಯಾಯಾಧೀಶರು ಮತ್ತು ವೈದ್ಯರು ಜೀವನ ಮತ್ತು ಸ್ವಾತಂತ್ರ್ಯವನ್ನು ಒಳಗೊಂಡಿರುವ ವಿಷಯಗಳಲ್ಲಿ ವ್ಯವಹರಿಸುವುದರಿಂದ ಮುಷ್ಕರ ನಡೆಸುವಂತಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿತು.
ಟಿಎಂಸಿ, ಬಿಜೆಪಿಗೆ ಬುದ್ಧಿವಾದ
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಮತ್ತು ಬಿಜೆಪಿಗೆ ಬುದ್ಧಿವಾದ ಹೇಳಿದ ನ್ಯಾಯಾಲಯ ಇತ್ತ ಸಿಬಿಐ ಮತ್ತು ಪ. ಬಂಗಾಳ ಸರ್ಕಾರ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ಟೀಕಿಸಿತು.
"ಮಮತಾ ಬ್ಯಾನರ್ಜಿ ಕಡೆಗೆ ಕೈತೋರುವವರ ಬೆರಳು ಕತ್ತರಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಹಾಲಿ ಸಚಿವರೊಬ್ಬರು ಹೇಳುತ್ತಾರೆ" ಎಂದು ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಪ್ರಸ್ತಾಪಿಸಿದರು.
ಆಗ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಗುಂಡು ಹಾರಿಸಲಾಗುವುದು ಎಂದಿದ್ದಾರೆ ಎಂದರು.
ಆ ಸಂದರ್ಭದಲ್ಲಿ ನ್ಯಾಯಾಲಯ ಪರಿಸ್ಥಿತಿಯನ್ನು ರಾಜಕೀಯಗೊಳಿಸಬೇಡಿ ಕಾನೂನು ತನ್ನ ಹಾದಿಯನ್ನು ಕಂಡುಕೊಳ್ಳಲಿದೆ ಎಂಬುದಾಗಿ ತಿಳಿಸಿತು.