ಮುಸ್ಲಿಮರಿಗೆ ಥಳಿತ: ನಮ್ಮನ್ನು ಶಿಕ್ಷಿಸದಿರಿ, ಪರಿಹಾರ ನೀಡುತ್ತೇವೆ ಎಂದು ಗುಜರಾತ್ ಹೈಕೋರ್ಟನ್ನು ಅಂಗಲಾಚಿದ ಪೊಲೀಸರು

ತಮಗೆ ಶಿಕ್ಷೆ ವಿಧಿಸಿದರೆ ಅದರಿಂದ ತಮ್ಮ10- 15 ವರ್ಷಗಳ ಸೇವಾವಧಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶ ಪರಿಗಣಿಸುವಂತೆ ಆರೋಪಿ ಸ್ಥಾನದಲ್ಲಿರುವ ನಾಲ್ವರು ಪೊಲೀಸರು ಮನವಿ ಮಾಡಿದರು.
Gujarat High Court
Gujarat High Court

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಮ್ಮನ್ನು ಶಿಕ್ಷಿಸುವ ಬದಲು ಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಸ್ಲಿಂ ಪುರುಷರಿಗೆ ಸಾರ್ವಜನಿಕವಾಗಿ ಥಳಿಸಿದ್ದ ನಾಲ್ವರು ಪೊಲೀಸರು ಗುಜರಾತ್‌ ಹೈಕೋರ್ಟ್‌ಗೆ ಬುಧವಾರ ಅಂಗಲಾಚಿದ್ದಾರೆ.

ನ್ಯಾಯಾಂಗ ನಿಂದನೆ ಆರೋಪ ಕುರಿತಂತೆ ತೀರ್ಪು ನೀಡುವ ಮೊದಲು ತಾವು ಸಲ್ಲಿಸಿರುವ ಸೇವಾವಧಿಯನ್ನು ಪರಿಗಣಿಸುವಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಗಳಾದ ಎ ವಿ ಪರ್ಮಾರ್, ಡಿ ಬಿ ಕುಮಾವರ್, ಕನಕಸಿಂಗ್ ಲಕ್ಷ್ಮಣ್ ಸಿಂಗ್ ಹಾಗೂ ರಾಜು ರಮೇಶಭಾಯಿ ದಾಭಿ ಅವರು  ಹಿರಿಯ ವಕೀಲ ಪ್ರಕಾಶ್ ಜಾನಿ ಮೂಲಕ ನ್ಯಾಯಮೂರ್ತಿ ಎ ಎಸ್ ಸುಪೇಹಿಯಾ ಮತ್ತು ಗೀತಾ ಗೋಪಿ ಅವರಿದ್ದ ಪೀಠವನ್ನು ಕೋರಿದ್ದಾರೆ.

ತಮಗೆ ಶಿಕ್ಷೆ ವಿಧಿಸಿದರೆ ಅದರಿಂದ ತಮ್ಮ 10 ರಿಂದ 15 ವರ್ಷಗಳ ಸೇವಾವಧಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಪರಿಗಣಿಸುವಂತೆ ಆರೋಪಿ ಸ್ಥಾನದಲ್ಲಿರುವ ಪೊಲೀಸರು ಮನವಿ ಮಾಡಿದ್ದಾರೆ. ಹೈಕೋರ್ಟ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಿತ್ತು.

ಘಟನೆಯ ಸಂತ್ರಸ್ತರು ಇಲ್ಲವೇ ದೂರುದಾರರು ಈ ಸಂಬಂಧ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದ ನ್ಯಾಯಾಲಯ ಅಕ್ಟೋಬರ್ 16ರ  ಸೋಮವಾರಕ್ಕೆ ಪ್ರಕರಣ ಮುಂದೂಡಿದೆ.

ಉಧೇಲಾ ಗ್ರಾಮದಲ್ಲಿ ನವರಾತ್ರಿ ಸಂಭ್ರಮದ ವೇಳೆ ಕಲ್ಲು ತೂರಿದ ಆರೋಪದ ಮೇಲೆ ಖೇಡ್‌ ಜಿಲ್ಲೆಯ ಮತಾರ್‌ ಠಾಣೆಯ ಪೊಲೀಸರು ಮಲೇಕ್‌ ಕುಟುಂಬದ ಐವರಿಗೆ ಸಾರ್ವಜನಿಕವಾಗಿ ಥಳಿಸಿದ್ದರು. ತಮ್ಮನ್ನು ಬಂಧಿಸುವಾಗ ಸೂಕ್ತ ಕ್ರಮ ಅನುಸರಿಸಿಲ್ಲ, ಡಿ ಕೆ ಬಸು ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಮಾರ್ಗಸೂಚಿ ಉಲ್ಲಂಘಿಸಲಾಗಿದೆ. ಈ ಸಂಬಂಧ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com