ಅರಣ್ಯೀಕರಣಕ್ಕಾಗಿ ಭೂಮಿ ಒದಗಿಸದೆ ಕಾಡಿನ ಭೂಮಿ ಕಡಿತಗೊಳಿಸುವಂತಿಲ್ಲ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಮಹತ್ವದ ಆದೇಶ

2023ರ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ದೇಶನ ನೀಡಲಾಗಿದೆ.
Forest
Forest
Published on

ಮಹತ್ವದ ಆದೇಶವೊಂದರಲ್ಲಿ, ಅರಣ್ಯೀಕರಣದ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಗಳು ಇಲ್ಲವೇ ಕೇಂದ್ರ ಸರ್ಕಾರ ಪರಿಹಾರಾತ್ಮಕ ಭೂಮಿ ಒದಗಿಸದೆ ಅರಣ್ಯ ಭೂಮಿ ಕಡಿಮೆಯಾಗುವಂತಹ ಯಾವುದೇ ಕೆಲಸ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಫೆಬ್ರವರಿ 3 ರಂದು ನಿರ್ದೇಶಿಸಿದೆ [ಅಶೋಕ್ ಕುಮಾರ್ ಶರ್ಮಾ, ಭಾರತೀಯ ಅರಣ್ಯ ಸೇವೆ (ನಿವೃತ್ತ) ಮತ್ತಿತರರು ಹಾಗೂ ಭಾರತ ಒಕ್ಕೂಟ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

2023 ರ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.

Also Read
ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ: ಜ.15ರಂದು ಜಂಟಿ ಸರ್ವೇಗೆ ಹೈಕೋರ್ಟ್‌ ಸೂಚನೆ

"ಮುಂದಿನ ಆದೇಶದವರೆಗೆ, ಅರಣ್ಯೀಕರಣದ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಅಥವಾ ಭಾರತ ಒಕ್ಕೂಟ ಸರ್ಕಾರ ಪರಿಹಾರಾತ್ಮಕ ಭೂಮಿ ಒದಗಿಸದೆಯೇ, ಅರಣ್ಯ ಭೂಮಿಯ ಕಡಿತಕ್ಕೆ ಕಾರಣವಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ" ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಟಿ ಎನ್ ಗೋದವರ್ಮನ್ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದ 'ಅರಣ್ಯ'ದ ವ್ಯಾಖ್ಯಾನವನ್ನು 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯಿದೆ ದುರ್ಬಲಗೊಳಿಸುತ್ತದೆ ಎಂದು ದೂರಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರಣ್ಯ ಪದದ ನಿಘಂಟಿನ ಅರ್ಥವನ್ನು ಕೂಡ ಕಾಯಿದೆಯ ಅರಣ್ಯ ಕುರಿತಾದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಆದರೆ ತಿದ್ದುಪಡಿ ಕಾಯಿದೆಯು ಅರಣ್ಯ ವ್ಯಾಖ್ಯಾನವನ್ನು ಸೀಮಿತಗೊಳಿಸಿ ಹಿಂದೆ ರಕ್ಷಿಸಲಾಗಿದ್ದ ವಿಶಾಲ ಅರಣ್ಯ ಭೂಮಿಯನ್ನು ಹೊರಗಿಟ್ಟಿದೆ ಎಂದು ತೀರ್ಪು ಹೇಳಿದೆ.

ಅರಣ್ಯ ಭೂಮಿಯನ್ನು ರೇಖೀಯ ಯೋಜನೆಗಳು (ಯರಸ್ತೆ, ರೈಲು ಮುಂತಾದ ಮೂಲಸೌಕರ್ಯ ಯೋಜನೆಗಳು), ಸಾರ್ವಜನಿಕ ಉಪಯುಕ್ತತೆ ಯೋಜನೆಗಳು ಮತ್ತು ಭದ್ರತಾ ಯೋಜನೆಗಳಿಗೆ ಬಳಸಲಾಗುತ್ತಿದೆ. ಭಾರತದ ಗಡಿಯುದ್ದಕೂ 100 ಕಿ.ಮೀ ವ್ಯಾಪ್ತಿಯ ಅರಣ್ಯ ಭೂಮಿಯನ್ನು ಕೂಡ ತಿದ್ದುಪಡಿ ಕಾಯಿದೆಯಲ್ಲಿ ಅರಣ್ಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.

ತಿದ್ದುಪಡಿ ಕಾಯಿದೆಯು ವರ್ಗೀಕರಿಸದ ಕಾಡುಗಳ ಬಳಕೆಯನ್ನು ಪರಿಹಾರಾತ್ಮಕ ಅರಣ್ಯೀಕರಣದ ಅನುಪಾಲನೆಗಾಗಿ ಕಾನೂನುಬದ್ಧಗೊಳಿಸುತ್ತದೆ, ಇದು ರಾಷ್ಟ್ರೀಯ ಅರಣ್ಯ ನೀತಿ 1988ಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಕೂಡ ಅರ್ಜಿದಾರರು ಗಮನ ಸೆಳೆದಿದ್ದರು.

Also Read
ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ಅಧಿಕಾರಾವಧಿ ಅಬಾಧಿತ; ಅರಣ್ಯ ಇಲಾಖೆ ಅಧಿಸೂಚನೆ ವಜಾಗೊಳಿಸಿದ ಹೈಕೋರ್ಟ್‌

ಈ ಹಿಂದಿನ ವಿಚಾರಣೆಯ ವೇಳೆ, ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದ್ದರು. ತಿದ್ದುಪಡಿ ಜಾರಿಯ ಉದ್ದೇಶ ನ್ಯಾಯಾಲಯ ಅಳವಡಿಸಿಕೊಂಡಿರುವ "ಅರಣ್ಯ"ದ ವ್ಯಾಖ್ಯಾನವನ್ನು ನಿರ್ಬಂಧಿಸುವುದಲ್ಲ, ಬದಲಿಗೆ ಟಿ ಎನ್ ಗೋದವರ್ಮನ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಜಾರಿಗೆ ತರುವುದಾಗಿದೆ ಎಂದು ಸಮರ್ಥಿಸಿದ್ದರು. ಮುಂದಿನ ವಿಚಾರಣೆ ನಡೆಯುವ (ಮಾರ್ಚ್ 4) ಹೊತ್ತಿಗೆ ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದರು.

ವಿವಿಧ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣನ್, ಪ್ರಶಾಂತೋ ಚಂದ್ರ ಸೇನ್, ಅನಿತಾ ಶೆಣೈ, ಶ್ಯಾಮ್ ದಿವಾನ್, ಅಡ್ವೊಕೇಟ್ ಆನ್ ರೆಕಾರ್ಡ್ ಪ್ರಶಾಂತ್ ಭೂಷಣ್ ಮತ್ತವರ ತಂಡ ವಾದ ಮಂಡಿಸಿತು. ಪ್ರತಿವಾದಿಗಳನ್ನು ಐಶ್ವರ್ಯ ಭಾಟಿ, ಹಿರಿಯ ವಕೀಲ ಪಿಪಿ ಹೆಗ್ಡೆ ಮತ್ತವರ ತಂಡ ಪ್ರತಿನಿಧಿಸಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Ashok_Kumar_Sharma__Indian_Forest_Service__Retd____Ors__Vs_Union_Of_India___Anr
Preview
Kannada Bar & Bench
kannada.barandbench.com