ಸರ್ಕಾರ ಕೊಲಿಜಿಯಂ ಕಡತಗಳ ತಡೆ ಹಿಡಿದಿಲ್ಲ, ಹಾಗೆ ಹೇಳುವುದಾದರೆ ನೀವೇ ನ್ಯಾಯಮೂರ್ತಿಗಳನ್ನು ನೇಮಿಸಿಕೊಳ್ಳಿ: ರಿಜಿಜು

ಉತ್ತಮ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರುವವರೆಗೆ ಸರ್ಕಾರ ಕೊಲಿಜಿಯಂ ವ್ಯವಸ್ಥೆಯನ್ನು ಗೌರವಿಸುತ್ತದೆ. ಆದರೆ ಅಲ್ಲಿಯವರೆಗೆ ಕೊಲಿಜಿಯಂ ಶಿಫಾರಸುಗಳ ಕುರಿತು ನಿರ್ಧರಿಸುವ ಮೊದಲು ಸರ್ಕಾರ ತನ್ನ ಪಾಲಿನ ಗಮನವನ್ನು ಹರಿಸಲಿದೆ ಎಂದ ಸಚಿವರು.
ಸರ್ಕಾರ ಕೊಲಿಜಿಯಂ ಕಡತಗಳ ತಡೆ ಹಿಡಿದಿಲ್ಲ, ಹಾಗೆ ಹೇಳುವುದಾದರೆ ನೀವೇ ನ್ಯಾಯಮೂರ್ತಿಗಳನ್ನು ನೇಮಿಸಿಕೊಳ್ಳಿ: ರಿಜಿಜು
Published on

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಮತ್ತೆ ಕಿಡಿಕಾರಿರುವ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಇದು ಭಾರತಕ್ಕೆ ಅನ್ಯವಾದ ವ್ಯವಸ್ಥೆ ಎಂದಿದ್ದಾರೆ.  

ಶುಕ್ರವಾರ ನಡೆದ ʼಟೈಮ್ಸ್‌ ನೌ ಸಮ್ಮಿಟ್‌ʼ ಕಾರ್ಯಕ್ರಮದಲ್ಲಿ “ಶೇಪಿಂಗ್‌ ಇಂಡಿಯನ್‌ ಜುಡಿಷಿಯರಿ ಫಾರ್‌ ಇಂಡಿಯಾ” ಎಂಬ ವಿಚಾರವಾಗಿ ಅವರು ಮಾತನಾಡಿದರು.

ಕೊಲಿಜಿಯಂ ಶಿಫಾರಸುಗಳನ್ನು ಅಂಗೀಕರಿಸುತ್ತಿಲ್ಲ ಎಂದು ಆರೋಪಿಸಲಾಗದು ಮತ್ತು ತಾನು ಮಾಡಿದ ಎಲ್ಲಾ ಶಿಫಾರಸುಗಳಿಗೆ ಸರ್ಕಾರ ಸಹಿ ಹಾಕಬೇಕೆಂದು ನ್ಯಾಯಮೂರ್ತಿಗಳ ಮಂಡಳಿ ನಿರೀಕ್ಷಿಸಲೂ ಆಗದು ಎಂದು ಅವರು ಹೇಳಿದರು.

“ಕೊಲಿಜಿಯಂನಲ್ಲಿ ಲೋಪದೋಷಗಳಿದ್ದು ಹೀಗಾಗಿಯೇ ಜನತೆ ಕೊಲಿಜಿಯಂ ವ್ಯವಸ್ಥೆ ಪಾರದರ್ಶಕವಾಗಿಲ್ಲ ಅದರಲ್ಲಿ ಕೊಂಚ ಅಪಾರದರ್ಶಕತೆ ಇದ್ದು, ಉತ್ತರದಾಯಿತ್ವ ಇಲ್ಲ ಎಂದು ಧ್ವನಿ ಎತ್ತಿದ್ದಾರೆ. ಹಾಗಾಗಿ, ಸರ್ಕಾರ ಕೊಲಿಜಿಯಂ ಕಡತಗಳ ಮೇಲೆ ಕುಳಿತಿದೆ (ತಡೆ ಹಿಡಿದಿದೆ) ಎನ್ನದಿರಿ, ಹಾಗೆ ಹೇಳುವುದಾದರೆ, ನೀವೇ ನ್ಯಾಯಮೂರ್ತಿಗಳನ್ನು ನೇಮಿಸಿಕೊಂಡು ಆಟ ಮುಂದುವರೆಸಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತಮ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರುವವರೆಗೆ ಸರ್ಕಾರ ಕೊಲಿಜಿಯಂ ವ್ಯವಸ್ಥೆಯನ್ನು ಗೌರವಿಸುತ್ತದೆ. ಆದರೆ ಅಲ್ಲಿಯವರೆಗೆ ಕೊಲಿಜಿಯಂ ಶಿಫಾರಸುಗಳ ಕುರಿತು ಕೆಲಸ ಮಾಡುವ ಮೊದಲು ಸರ್ಕಾರ ತನ್ನ ಪಾಲಿನ ಗಮನವನ್ನು ಹರಿಸಲಿದೆ ಎಂದರು.

ಒಬ್ಬ ವ್ಯಕ್ತಿಯ ಹಿನ್ನೆಲೆ ಮತ್ತು ಅವರು ನ್ಯಾಯಾಧೀಶರ ಕೆಲಸಕ್ಕೆ ಅರ್ಹರಾಗಿದ್ದಾರೆಯೇ ಎಂಬುದನ್ನು ಅರಿಯುವ ಸಾಧನ ಸರ್ಕಾರದ ಬಳಿ ಇದೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಮತ್ತು ವಿಶೇಷವಾಗಿ ಕೇಂದ್ರ ಸರ್ಕಾರಕ್ಕೆ ಧಾರ್ಮಿಕ ದಾಖಲೆಯಾಗಿದ್ದು ಸಂವಿಧಾನಕ್ಕೆ ಹೊರತಾದ ಯಾವುದನ್ನೇ ಆದರೂ ಸರ್ಕಾರ  ಪ್ರಶ್ನಿಸುತ್ತದೆ ಎಂದು ಕಾನೂನು ಸಚಿವರು ಸಮರ್ಥಿಸಿಕೊಂಡರು.

"ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ ಅನ್ಯವಾದುದಾಗಿದೆ. ಈ ವ್ಯವಸ್ಥೆಗೆ ಸಂವಿಧಾನದ ಯಾವ ನಿಯಮದಡಿ ಅವಕಾಶ ನೀಡಿದೆ ಎಂಬುದನ್ನು ನೀವು ತಿಳಿಸಿ. ಸುಪ್ರೀಂ ಕೋರ್ಟ್ ತನ್ನ ವಿವೇಕದಿಂದ ನ್ಯಾಯಾಲಯದ ರೂಲಿಂಗ್‌ ಅಥವಾ ತೀರ್ಪಿನ ಮೂಲಕ ಹೆಸರುಗಳನನು ಶಿಫಾರಸು ಮಾಡುವ, ಸರ್ಕಾರ ಅದನ್ನು ಪರಿಶೀಲಿಸುವ ಕೊಲಿಜಿಯಂ ವ್ಯವಸ್ಥೆ ರಚಿಸಿಕೊಂಡಿದೆ" ಎಂದು ಅವರು ಹೇಳಿದರು.

ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಇತ್ತೀಚಿನ ಸಂಘರ್ಷದ ಕುರಿತು ಮಾತನಾಡಿದ ರಿಜಿಜು ಅವರು “ಪ್ರಜಾಪ್ರಭುತ್ವದ ಎರಡು ಸ್ತಂಭಗಳು ಒಟ್ಟಾಗಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದರು.

"ಸರ್ಕಾರ ಮತ್ತು ನ್ಯಾಯಾಂಗವು ಜನರ ಸೇವೆಗೋಸ್ಕರ ಒಟ್ಟಿಗೆ ಕೆಲಸ ಮಾಡಬೇಕಿದೆ. ಪ್ರಾಬಲ್ಯಕ್ಕಾಗಿ ಹೋರಾಟ ಅಥವಾ ಹಗ್ಗ ಜಗ್ಗಾಟದ ಪ್ರಶ್ನೆಯೇ ಇಲ್ಲ, ವಾಸ್ತವವಾಗಿ, ಇದು ರಾಷ್ಟ್ರದ ಸೇವೆಗೆ ಸಂಬಂಧಿಸಿದ ಪ್ರಶ್ನೆ. ನಾನು ಸಂವಿಧಾನಕ್ಕೆ ಬದ್ಧನಾಗಿದ್ದು ಅದಕ್ಕೆ ಹೊರತಾದದ್ದು ಏನಾದರೂ ಇದ್ದರೆ ಅದನ್ನು ಜನ ಪ್ರಶ್ನಿಸುತ್ತಾರೆ, ”ಎಂದು ರಿಜಿಜು ಸ್ಪಷ್ಟಪಡಿಸಿದರು.

ನಿಖಿಲ್ ಕರಿಯೆಲ್ ಅವರ ವರ್ಗಾವಣೆ  ವಿರೋಧಿಸಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ  ಇತ್ತೀಚೆಗೆ ಕರೆ ನೀಡಿದ್ದ ಮುಷ್ಕರ  ಪ್ರಸ್ತಾಪಿಸಿದ ಅವರು  " ಕೊಲಿಜಿಯಂ ವ್ಯವಸ್ಥೆ  ಪರಿಪೂರ್ಣವಾಗಿದೆ ಎಂದು ನನಗೆ ತೋರುತ್ತಿಲ್ಲ. ಆದರೆ ನಾನದನ್ನು ಗೌರವಿಸುತ್ತೇನೆ ಎಂದು ನಾನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ಹಿಂದೆ ಹೇಳಿದ್ದೆ. ನ್ಯಾಯಮೂರ್ತಿಗಳನ್ನು ಯಾವ ಆಧಾರದ ಮೇಲೆ ವರ್ಗಾಯಿಸಲಾಗಿದೆ ಎಂಬ ವಿಚಾರ ಎತ್ತಲು ಬಯಸುವುದಿಲ್ಲ. ಆದರೆ ವಕೀಲರು ಪ್ರತಿಭಟನೆ ಮಾಡಿ ಹೈಕೋರ್ಟ್ ಮುಚ್ಚಿದರೆ ನಾಳೆ ಕೆಲವು ನ್ಯಾಯಾಧೀಶರಿಗಾಗಿ  ಪುನಃ ಧರಣಿ ನಡೆಯುತ್ತದೆ. ಅಂತಹ ಪರಿಸ್ಥಿತಿ ನಿಭಾಯಿಸಲು ಯಾವುದೇ ಕಾರ್ಯವಿಧಾನ ಇಲ್ಲದಿದ್ದರೆ ಭವಿಷ್ಯದಲ್ಲಿ ಅದು ಕಷ್ಟಕರವಾಗುತ್ತದೆ. ನ್ಯಾಯಾಧೀಶರನ್ನು ಮುಟ್ಟಲೂ ಆಗದಂತಾಗುತ್ತದೆ ”ಎಂದರು.

ನ್ಯಾಯಾಲಯದಲ್ಲಿ ಮಾತನಾಡುವಾಗ ನ್ಯಾಯಾಧೀಶರು ಬಹಳ ಜಾಗರೂಕರಾಗಿರಬೇಕು ಲಕ್ಷ್ಮಣ ರೇಖೆಯನ್ನು ದಾಟಬಾರದು ಎಂದು ಅವರು ಹೇಳಿದರು.

"ನ್ಯಾಯಾಂಗವನ್ನು ಗೌರವಿಸುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿರುವುದರಿಂದ ನ್ಯಾಯಾಧೀಶರು ಸಾಮಾಜಿಕ ಮಾಧ್ಯಮ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ನಿಂದನೆಗೆ ಒಳಗಾಗುವುದನ್ನು ನಾನು ಬಯಸುವುದಿಲ್ಲ. ಆದರೆ ಜನರ ಭಾವನೆಗಳನ್ನು ಕೆಣಕುವಂತಹ ಕೆಲವು ನಡವಳಿಕೆ ಅಥವಾ ವ್ಯಾಖ್ಯಾನದಲ್ಲಿ ನ್ಯಾಯಾಧೀಶರು ತೊಡಗಿದ್ದರೆ ಆಗ  ನ್ಯಾಯಾಧೀಶರು ಅಥವಾ ಅವರ ತೀರ್ಪು ಲಕ್ಷ್ಮಣ ರೇಖೆ  ದಾಟಿದೆಯೇ ಎಂದು ಯೋಚಿಸಿ, ಅವರು ಟೀಕೆಗೆ ತುತ್ತಾಗಿದ್ದಾರೆಯೇ ಎಂಬುದನ್ನು ನೋಡಬೇಕಾಗುತ್ತದೆ. ಹೀಗಾಗಿ, ನಾವೆಲ್ಲರೂ ಜಾಗರೂಕರಾಗಿರಬೇಕು, ”ಎಂದು ಅವರು ಒತ್ತಿ ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ 70,000 ಕ್ಕೂ ಹೆಚ್ಚು, ಹೈಕೋರ್ಟ್‌ಗಳಲ್ಲಿ 70 ಲಕ್ಷ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ 4 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದ ಕಾನೂನು ಸಚಿವರು ಇದು ಚಿಂತಾಜನಕವಾಗಿದ್ದು ಹಳೆಯ ಬಾಕಿ ಇರುವ ಪ್ರಕರಣಗಳನ್ನು ಮತ್ತು ಭವಿಷ್ಯದಲ್ಲಿ ಎದುರಾಗುವ ಬಾಕಿ ಪ್ರಕರಣಗಳನ್ನು ನಿಭಾಯಿಸಲು ಭಾರತೀಯ ನ್ಯಾಯಾಂಗವನ್ನು ಹೇಗೆ ಸದೃಢಗೊಳಿಸುವುದು ಎಂಬುದೇ ತಮ್ಮ ತಕ್ಷಣದ ಕಾಳಜಿ ಎಂದು ಹೇಳಿದರು.

ಹಿರಿಯ ನ್ಯಾಯವಾದಿಗಳು ಲಕ್ಷಗಳ ಲೆಕ್ಕದಲ್ಲಿ ಶುಲ್ಕ ವಿಧಿಸುತ್ತಿದ್ದಾರೆ ಹೀಗಾಗಿ ನ್ಯಾಯ ಎಂಬುದು ಶ್ರೀಮಂತರ ಕೈಗೆ ಮಾತ್ರ ಎಟಕುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

"ನ್ಯಾಯದಾನ ಪಾರದರ್ಶಕವಾಗಿರುವಂತೆ ನಾವು ನೋಡಿಕೊಳ್ಳಬೇಕು. ಕೆಲವು ಹಿರಿಯ ವಕೀಲರು ಪ್ರತಿ ವಿಚಾರಣೆಗೆ ₹ 30 ರಿಂದ ₹ 40 ಲಕ್ಷವನ್ನು ವಿಧಿಸುತ್ತಾರೆ. ಇದರರ್ಥ ಶ್ರೀಮಂತರು ಮಾತ್ರ ನ್ಯಾಯವನ್ನು ಪಡೆಯಲು ಸಾಧ್ಯ ಆದರೆ ಬಡವರಿಗೆ  ಅದು ಸಾಧ್ಯವಿಲ್ಲ.  ಹಾಗಾದರೆ ಅವರು ನಿಜವಾಗಿಯೂ ಹೆಚ್ಚಿನ ಹಣ  ಪಾವತಿಸುವ ಮೂಲಕ ನ್ಯಾಯವನ್ನು ಖರೀದಿಸುತ್ತಿದ್ದಾರೆ" ಎಂದು ಅವರು ಹೇಳಿದರು.

Kannada Bar & Bench
kannada.barandbench.com