ಗುಜರಾತ್‌ನಲ್ಲಿ ಜಿಲ್ಲಾ ನ್ಯಾಯಾಧೀಶರ ಬಡ್ತಿ ಮತ್ತು ನೇಮಕಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ ಆರ್ ಶಾ ಮತ್ತು ಹಿರಿಯ ವಕೀಲ ದುಷ್ಯಂತ್ ದವೆ ನಡುವೆ ನಡೆದ ಮಾತಿನ ಚಕಮಕಿಗೆ ಸುಪ್ರೀಂ ಕೋರ್ಟ್‌ನ ನಾಲ್ಕನೇ ನ್ಯಾಯಾಲಯ ಸೋಮವಾರ ಸಾಕ್ಷಿಯಾಯಿತು.
ಬಡ್ತಿ, ಸೇವಾ ಷರತ್ತು ಹಾಗೂ ನೇಮಕಾತಿಗಳಿಗೆ ಸಂಬಂಧಿಸಿದ ಅಖಿಲ ಭಾರತ ನ್ಯಾಯಾಧೀಶರ ಸಂಘದ ಪ್ರಕರಣವನ್ನು ಈಗಾಗಲೇ (ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ) ಮತ್ತೊಂದು ಪೀಠ ವಿಚಾರಣೆ ನಡೆಸುತ್ತಿರುವಾಗ ಪ್ರಕರಣವನ್ನು ವಿಲೇವಾರಿ ಮಾಡಲು ಈ ಪೀಠ ಆತುರ ತೋರುತ್ತಿರುವುದು ಏಕೆ ಎಂದು ನ್ಯಾಯಮೂರ್ತಿಗಳಾದ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠವನ್ನು ದವೆ ಪ್ರಶ್ನಿಸಿದರು.
“ವಿಸ್ತೃತ ಪ್ರಕರಣವನ್ನು 1ನೇ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವಾಗ ಘನ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಲೇವಾರಿ ಮಾಡಲು ಆತುರ ತೋರುತ್ತಿರುವುದೇಕೆ? ನಾನಿದನ್ನು ಗಂಭೀರವಾಗಿ ಆಕ್ಷೇಪಿಸುತ್ತೇನೆ” ಎಂದು ದವೆ ಹೇಳಿದರು.
ಆಗ ನ್ಯಾಯಮೂರ್ತಿ ಶಾ “ನನ್ನ ವೃತ್ತಿಜೀವನದ ಅಂತ್ಯದಲ್ಲಿ ನಿಮ್ಮ ಬಗ್ಗೆ ಏನನ್ನಾದರೂ ಮಾತನಾಡುವಂತೆ ಮಾಡಬೇಡಿ. ಅರ್ಹತೆಯ ಮೇಲೆ ವಾದಿಸಿ” ಎಂದು ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದವೆ ಅವರು “ಮೈಲಾರ್ಡ್, ನನಗೆ ಬೆದರಿಕೆ ಹಾಕದಿರಿ. ನಾನು ಹೇಳಬೇಕಾದ ಅಂಶವನ್ನು ಹೇಳುತ್ತಿದ್ದೇನೆ” ಎಂದು ವಾದ ಮುಂದುವರೆಸಿದರು.
ಸೇವಾ ಹಿರಿತನ ಮತ್ತು ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿದ ಗುಜರಾತ್ ಸರ್ಕಾರ ಮತ್ತು ಗುಜರಾತ್ ಹೈಕೋರ್ಟ್‌ನ ಕ್ರಮ ಪ್ರಶ್ನಿಸಿ ಜಿಲ್ಲಾ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ʼಮೆರಿಟ್ ಮತ್ತು ಸೇವಾ ಹಿರಿತನದ ಆಧಾರʼದ ಮೇಲೆಯೇ ನೇಮಕಾತಿ ನಡೆಯಬೇಕು. ಆದರೆ ತಮಗಿಂತಲೂ ಅತಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ ಎಂಬುದು ಅರ್ಜಿದಾರರ ಅಳಲಾಗಿತ್ತು. ಈ ಸಂಬಂಧ ಪೀಠ ಕಳೆದ ಏಪ್ರಿಲ್ 13ರಂದು ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.
ಆದರೆ, ನಾಲ್ಕು ದಿನಗಳ ನಂತರ ಸರ್ಕಾರ ಬಡ್ತಿ ಪಟ್ಟಿಯನ್ನು ಪ್ರಕಟಿಸಿತು. ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಇತ್ತೀಚೆಗೆ ತೀರ್ಪು ನೀಡಿದ ನ್ಯಾಯಾಧೀಶರೂ ಬಡ್ತಿ ಪಡೆದವರಲ್ಲಿ ಸೇರಿದ್ದರು. ನ್ಯಾಯಾಲಯವು ಪ್ರಕರಣವನ್ನು ಆಲಿಸುತ್ತಿರುವಾಗಲೇ ಸರ್ಕಾರವು ಕೈಗೊಂಡ ಈ ತರಾತುರಿ ನಡೆಯನ್ನು ಸರ್ವೋಚ್ಚ ನ್ಯಾಯಾಲಯವು ಏ 28 ರ ತನ್ನ ಆದೇಶದಲ್ಲಿ 'ಅತ್ಯಂತ ದುರದೃಷ್ಟಕರ' ಎಂದು ವ್ಯಾಖ್ಯಾನಿಸಿತ್ತು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗ ಮತ್ತು ನೋಟಿಸ್ ನೀಡಿ ವಿವರವಾದ ಆದೇಶ ಜಾರಿಗೆ ಮುಂದಾಗಿದ್ದಾಗ ಬಡ್ತಿ ಆದೇಶವನ್ನು ಸರ್ಕಾರ ಜಾರಿ ಮಾಡುವಲ್ಲಿ ತೋರಿದ ಆತುರವನ್ನು ತಾನು ಒಪ್ಪುವುದಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ನೇಮಕಾತಿ 2022ರ ಸಾಲಿಗೆ ಸಂಬಂಧಿಸಿದ್ದಾಗಿದೆ ಆದ್ದರಿಂದ ಯಾವುದೇ ಅಸಾಧಾರಣ ತುರ್ತು ಇರಲಿಲ್ಲ ಎಂಬುದಾಗಿ ನ್ಯಾಯಾಲಯ ತನ್ನ ಅಸಮಾಧಾನ ದಾಖಲಿಸಿತು. ಸಂಬಂಧಪಟ್ಟ ಕಾರ್ಯದರ್ಶಿ ಮತ್ತು ಹೈಕೋರ್ಟ್ ತನ್ನ ನಿಲುವನ್ನು ವಿವರಿಸಬೇಕು. ಜೊತೆಗೆ ಬಡ್ತಿ ಮತ್ತು ಮೆರಿಟ್ ಪಟ್ಟಿಯನ್ನು ಯಾವ ತತ್ವ ಆಧರಿಸಿ ತಯಾರಿಸಲಾಗಿದೆ ಎಂಬ ಬಗ್ಗೆ ವರದಿ ನೀಡಬೇಕು ಎಂದು ಅದು ಸೂಚಿಸಿತ್ತು.
“ನಾವು ಈ ಕ್ರಮಕ್ಕೆ ಸಮ್ಮತಿ ಸೂಚಿಸಲು ಸಾಧ್ಯವಿಲ್ಲ. ಯಾರೂ ಈ ನ್ಯಾಯಾಲಯವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಅಂತಿಮ ಆದೇಶಕ್ಕೆ ಒಳಪಟ್ಟು ಈ ರೀತಿ ಮುಂದುವರಿಯುವುದನ್ನು ನೀವು ಎಂದಾದರೂ ಕೇಳಿದ್ದೀರಾ?" ನ್ಯಾಯಮೂರ್ತಿ ಶಾ ಪ್ರಶ್ನಿಸಿದ್ದರು.
ಮೇ 1ರಂದು ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯ ಸರ್ಕಾರ “ ಅಧಿಸೂಚನೆಯು ನ್ಯಾಯಾಲಯದ ಹಿಂದಿನ ನಿರ್ದೇಶನಗಳನ್ನು ಉಲ್ಲಂಘಿಸಿಲ್ಲ ಬದಲಿಗೆ ಪಾಲಿಸಲಾಗಿದೆ” ಎಂದು ಹೇಳಿತ್ತು. ಪ್ರಕರಣದ ಮಧ್ಯಂತರ ಆದೇಶವನ್ನು ನ್ಯಾಯಾಲಯ ಇಂದು ಕಾಯ್ದಿರಿಸಿದೆ. ಬರುವ ಮೇ 15, ಸೋಮವಾರದಂದು ನ್ಯಾಯಮೂರ್ತಿ ಶಾ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]