

“ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು” ಎಂದು ಮೌಖಿಕವಾಗಿ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಸಿನಿಮಾ ಬ್ಯಾನರ್ ಮತ್ತು ಕಟೌಟ್‌ಗಳನ್ನು ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ಪೌರಾಯುಕ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂಬಂಧ ಕಾಂಗ್ರೆಸ್ ಮುಖಂಡ ಬಿ ವಿ ರಾಜೀವ್ ಗೌಡ ವಿರುದ್ಧ ದಾಖಲಾಗಿರುವ ಪ್ರಕರಣದ ರದ್ದತಿ ಕೋರಿರುವ ಅರ್ಜಿಯ ಆದೇಶವನ್ನು ಮಂಗಳವಾರ ಕಾಯ್ದಿರಿಸಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ಮತ್ತು ಬೆದರಿಕೆ ಹಾಕಿದ ಸಂಬಂಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪೌರಾಯುಕ್ತೆ ಜಿ ಅಮೃತಾ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಬಿ ವಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.
ರಾಜೀವ್ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಸ್ಥಳೀಯ ವ್ಯಕ್ತಿ ʼಕಲ್ಟ್ʼ ಸಿನಿಮಾದಲ್ಲಿ ನಟಿಸಿದ್ದಾರೆ. ಕಲಾವಿದನಿಗೆ ಬೆಂಬಲಿಸಿ, ಬ್ಯಾನರ್ ಮತ್ತು ಕಟೌಟ್ ಹಾಕಲಾಗಿತ್ತು. ವಾಟ್ಸಾಪ್ ಮೂಲಕ ಪೌರಾಯುಕ್ತರು ಬ್ಯಾನರ್ ಹಾಕಲು ಅನುಮತಿಸಿದ್ದರು. ಅದಕ್ಕೆ ಕಟ್ಟಬೇಕಾದ ಶುಲ್ಕವನ್ನೂ ಪಾವತಿಸಿದ್ದೇನೆ. ಆದರೆ, ಏಕಾಏಕಿ ಪೌರಾಯುಕ್ತರು ಜೆಡಿಎಸ್ ಪಕ್ಷದ ಬ್ಯಾನರ್‌ಗಳನ್ನು ಹಾಗೆ ಬಿಟ್ಟು, ನಮ್ಮ ಕಟೌಟ್ ಬ್ಯಾನರ್ ತೆರವು ಮಾಡಿದ್ದರು. ಇದರಿಂದ ಬೇಸರಗೊಂಡು ಪೌರಾಯುಕ್ತರ ವಿರುದ್ಧ ಕೆಲವು ಪದ ಬಳಿಸಿದ್ದೇನೆ. ಅದಕ್ಕೆ ಈಗಾಗಲೇ ಕ್ಷಮೆ ಕೋರಿದ್ದೇನೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ಹೊರಗೆ ಬಂದ ತಕ್ಷಣ ಸಾರ್ವಜನಿಕವಾಗಿ ಕ್ಷಮೆ ಕೋರಲಾಗುವುದು. ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನಾವು ಯಾವುದೇ ತೆರನಾದ ಕ್ರಿಮಿನಲ್ ಪಡೆ ಬಳಕೆ ಮಾಡಿಲ್ಲ” ಎಂದರು.
ಆಗ ಪೀಠವು “ಕಟೌಟ್ ಹಾಕಲು ನೀವೇನು ನಿರ್ಮಾಪಕರಾ? ನಟರಾ? ಅಧಿಕಾರಿ ಮಹಿಳೆ ಎಂಬ ಗೌರವವೂ ಇಲ್ಲದೆ ಮಾತನಾಡಿದ್ದೀರಲ್ಲಾ. ನಿಮ್ಮದೇ ಪಕ್ಷವೇ ಇದೆ. ಆದರೂ ಅಡಗಿ ಕುಳಿತಿರುವುದೇಕೆ? ರಾಜೀವ್ ಗೌಡ ಎಲ್ಲಿದ್ದಾರೆ? ನಿರೀಕ್ಷಣಾ ಜಾಮೀನು ಪಡೆಯಿರಿ” ಎಂದಿತು.
ಮುಂದುವರಿದು, “ಆಡಿದ ಮಾತುಗಳನ್ನು ಹಿಂಪಡೆಯಲಾಗದು. ನಾಲಿಗೆ ಸರಿಯಾಗಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ನೀವು ಕ್ಷಮೆ ಕೋರಬಹುದು ಆದರೆ, ಬಿರುಕು ಹಾಗೆ ಉಳಿಯಲಿದೆ ಎಂಬುದು ನಿಮ್ಮ ಗಮನಕ್ಕೆ ಇರಬೇಕು” ಎಂದಿತು.
ಅದಕ್ಕೆ ವಿವೇಕ್ ಅವರು “ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ರಕ್ಷಣೆ ಒದಗಿಸಿದರೆ ತನಿಖೆಗೂ ಸಹಕರಿಸುತ್ತೇನೆ. ಪೊಲೀಸರು ಬಂಧಿಸಲು ಕಾದು ಕುಳಿತಿದ್ದಾರೆ. ಹೀಗಾಗಿ, ರಕ್ಷಣೆ ಒದಗಿಸಿದರೆ ಸಾರ್ವಜನಿಕವಾಗಿ ಕ್ಷಮೆ ಕೋರಿ, ತನಿಖೆಯಲ್ಲಿ ಭಾಗಿಯಾಗುತ್ತೇನೆ” ಎಂದರು.
ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಾಲಯವು ನಾಳೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಪ್ರಕರಣದ ಹಿನ್ನೆಲೆ: ಸಾರ್ವಜನಿಕರ ದೂರಿನ ಮೇರೆಗೆ ಬ್ಯಾನರ್ ಮತ್ತು ಕಟೌಟ್ ತೆಗೆಸಿದ್ದಕ್ಕೆ ರಾಜೀವ್ ಗೌಡ ಅವರು ಆರೋಗ್ಯಾಧಿಕಾರಿ ಮತ್ತು ನನ್ನನ್ನು ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಪೌರಾಯುಕ್ತೆಯಾದ ಅಮೃತಾ ಅವರು 14.01.2026ರಂದು ನೀಡಿದ ದೂರಿನ ಅನ್ವಯ ಬಿಎನ್‌ಎಸ್ ಸೆಕ್ಷನ್‌ಗಳಾದ 132, 224, 352, 351(3) ಮತ್ತು 56ರ ಅಡಿ ಪ್ರಕರಣ ದಾಖಲಿಸಿದ್ದಾರೆ.