ವರದಕ್ಷಿಣೆ ಕಿರುಕುಳ ಪ್ರಕರಣ: ನಟಿ ಅಭಿನಯ, ತಾಯಿ, ಸಹೋದರನಿಗೆ ಜೈಲು ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್‌

ಆರೋಪಿಗಳಾಗಿದ್ದ ಜಯಮ್ಮ, ಚೆಲುವರಾಜ್, ಅಭಿನಯಗೆ ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ವಿಧಿಸಿದ್ದ 2 ವರ್ಷ ಶಿಕ್ಷೆ ಎತ್ತಿ ಹಿಡಿದ ನ್ಯಾಯಾಲಯ. ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3ರ ಅಡಿ ಜಯಮ್ಮಗೆ ವಿಧಿಸಿದ್ದ ಶಿಕ್ಷೆ 5 ವರ್ಷಕ್ಕೆ ಹೆಚ್ಚಳ.
Kannada actress Abhinaya and Karnataka HC
Kannada actress Abhinaya and Karnataka HC

ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದಶಕಗಳ ಹಿಂದಿನ ಪ್ರಕರಣದಲ್ಲಿ ಕನ್ನಡದ ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜ್‌ಗೆ ಜೈಲು ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.

ಬೆಂಗಳೂರಿನ ಲಕ್ಷ್ಮೀದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಿಂದ ಅಭಿನಯ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ದೂರುದಾರೆ ಲಕ್ಷ್ಮೀದೇವಿ ಸಹ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಎತ್ತಿ ಹಿಡಿದಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿ ಸತ್ರ ನ್ಯಾಯಾಲಯವು 2012ರ ಮಾರ್ಚ್‌ 9ರಂದು ಮಾಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲದೇ, ಪ್ರಕರಣದಲ್ಲಿ ಅಭಿನಯ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳು ಎಂದು ತೀರ್ಮಾನಿಸಿ 2010ರ ಜನವರಿ 5ರಂದು ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

“ಪ್ರಾಸಿಕ್ಯೂಷನ್ ಒದಗಿಸಿರುವ ಸಾಕ್ಷ್ಯಾಧಾರಗಳು ಆರೋಪಿಗಳು ಕೃತ್ಯ ಎಸಗಿರುವುದನ್ನು ಸಾಬೀತುಪಡಿಸುತ್ತವೆ. ಈ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರನ್ನು ದೋಷಿಗಳು ಎಂದು ತೀರ್ಮಾನಿಸಿದೆ. ಹೀಗಿದ್ದರೂ ಸತ್ರ ನ್ಯಾಯಾಲಯ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಹೊರಡಿಸಿರುವ ಆದೇಶ ಲೋಪದಿಂದ ಕೂಡಿದೆ” ಎಂದು ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಕನ್ನಡದ ನಟಿ ಅಭಿನಯ ಅವರ ಅಣ್ಣ ಶ್ರೀನಿವಾಸ್ ಹಾಗೂ ಲಕ್ಷ್ಮೀದೇವಿ ಅವರ ವಿವಾಹವು 1998ರ ಮಾರ್ಚ್‌ 23ರಂದು ನಡೆದಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 80 ಸಾವಿರ ರೂಪಾಯಿ ನಗದು ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಅದಾದ ನಂತರವೂ ಹೆಚ್ಚುವರಿ 20 ಸಾವಿರ ರೂಪಾಯಿ ಪಡೆದಿದ್ದರು. ಈ ಮಧ್ಯೆ ಗರ್ಭಿಣಿಯಾಗಿದ್ದ ಲಕ್ಷ್ಮೀದೇವಿ ತವರು ಮನೆಗೆ ತೆರಳಿದ್ದರು. 1999ರ ಅಕ್ಟೋಬರ್‌ 24ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ವರ್ಷಗಳು ಕಳೆದರೂ ಲಕ್ಷ್ಮೀದೇವಿ ಮತ್ತು ಮಗುವನ್ನು ಶ್ರೀನಿವಾಸ್ ಮನೆಗೆ ಕರೆದು ತಂದಿರಲಿಲ್ಲ.

ಇದರಿಂದ, 2002ರ ನವೆಂಬರ್‌ 9ರಂದು ಲಕ್ಷ್ಮೀದೇವಿ ತಂದೆ ಅವರು ಶ್ರೀನಿವಾಸ್‌ ಅವರ ಮನೆಗೆ ತೆರಳಿ, ಮಗಳು ಹಾಗೂ ಮೊಮ್ಮಗನನ್ನು ಮನೆಗೆ ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಅದಕ್ಕೆ ನಿರಾಕರಿಸಿದ್ದ ಶ್ರೀನಿವಾಸ್ ಮತ್ತವರ ಕುಟುಂಬದವರು 1 ಲಕ್ಷ ರೂಪಾಯಿ ವರದಕ್ಷಿಣೆ ನೀಡುವವರೆಗೂ ಲಕ್ಷ್ಮೀದೇವಿಯನ್ನು ಮನೆಗೆ ಸೇರಿಸುವುದಿಲ್ಲ ಎಂದು ಹೇಳಿದ್ದರಲ್ಲದೆ, ಅವರ ತಂದೆಗೆ ನಿಂದಿಸಿ, ಅಪಮಾನ ಮಾಡಿ ಕಳುಹಿಸಿದ್ದರು. ಘಟನೆಯ ಮರುದಿನವೇ ಲಕ್ಷ್ಮೀದೇವಿ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ಪತಿ ಶ್ರೀನಿವಾಸ್, ಮಾವ ರಾಮಕೃಷ್ಣ, ಅತ್ತೆ ಜಯಮ್ಮ, ಮೈದುನ ಚೆಲುರಾಜ್ ಹಾಗೂ ನಾದಿನಿ ಅಭಿನಯ ವಿರುದ್ಧ ದೂರು ದಾಖಲಿಸಿದ್ದರು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498-ಎ (ವರದಕ್ಷಿಣೆ ಕಿರುಕುಳ) ಹಾಗೂ ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3 ಹಾಗೂ 4ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶ್ರೀನಿವಾಸ್ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳು ಎಂದು ತೀರ್ಪು ನೀಡಿ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಗಳೆಲ್ಲರಿಗೂ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಜತೆಗೆ, ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಜಯಮ್ಮ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ಮತ್ತು ಸೆಕ್ಷನ್ 4ರ ಅಡಿಯಲ್ಲಿ 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ರೂಪಾಯಿ ದಂಡ ವಿಧಿಸಿ 2010ರ ಜನವರಿ 5ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಆರೋಪಿಗಳೆಲ್ಲರೂ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3ರ ಅಡಿ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಸರ್ಕಾರ ಸಹ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸತ್ರ ನ್ಯಾಯಾಲಯವು ಆರೋಪಿಗಳ ಮೇಲ್ಮನವಿ ಮಾನ್ಯ ಮಾಡಿ, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಅಲ್ಲದೇ, ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ, 2012ರ ಮಾರ್ಚ್‌ 9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹಾಗೂ ದೂರುದಾರೆ ಲಕ್ಷ್ಮೀದೇವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣಾ ಹಂತದಲ್ಲಿದ್ದಾಗ ಮೊದಲ ಆರೋಪಿ ಪತಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ಮಾವ ರಾಮಕೃಷ್ಣ ಮೃತಪಟ್ಟಿದ್ದರು. ಇದರಿಂದ, ಹೈಕೋರ್ಟ್ ಅವರನ್ನು ಪ್ರಕರಣದಿಂದ ಕೈಬಿಟ್ಟಿತು. ಇದೀಗ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರನೇ ಆರೋಪಿಯಾದ ಅತ್ತೆ ಜಯಮ್ಮ, ನಾಲ್ಕನೇ ಆರೋಪಿಯಾದ ಮೈದುನ ಚೆಲುವರಾಜ್ ಹಾಗೂ ಐದನೇ ಆರೋಪಿಯಾದ ನಾದಿನಿ ಅಭಿನಯ ಅವರಿಗೆ ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ವಿಧಿಸಿದ್ದ 2 ವರ್ಷ ಶಿಕ್ಷೆ ಹಾಗೂ ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 4ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷ ಶಿಕ್ಷೆಯನ್ನು 5 ವರ್ಷಕ್ಕೆ ಹೆಚ್ಚಿಸಿದೆ.

ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಅಪರಾಧ ಸಾಬೀತಾದರೆ, ಕನಿಷ್ಠ 5 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ, 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸುವ ಅಗತ್ಯತೆ ಇದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com