ದೀರ್ಘಾವಧಿಯ ವಿದೇಶಾಂಗ ನೀತಿಯಲ್ಲಿ ರಾಜಿಯಾಗದಂತೆ ಭಾರತ ಮುಕ್ತತೆ ಕಾಪಾಡಿಕೊಳ್ಳಬೇಕು: ಡಾ. ಎ ಎಂ ಸಿಂಘ್ವಿ

ಅಮೆರಿಕ ಪ್ರವಾಸದಲ್ಲಿರುವ ಸಿಂಘ್ವಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಫ್ಲೆಚರ್ ಶಾಲೆಯಲ್ಲಿ ನಾಲ್ಕು ಉಪನ್ಯಾಸಗಳನ್ನು ನೀಡಿದರು.
Dr. Abhishek Manu Singhvi at the Fletcher School
Dr. Abhishek Manu Singhvi at the Fletcher School
Published on

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿದೇಶಾಂಗ ನೀತಿಯಲ್ಲಾಗುತ್ತಿರುವ ಸ್ಥಿತ್ಯಂತರಗಳನ್ನು ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ, ರಾಜ್ಯಸಭಾ ಸದಸ್ಯ ಡಾ. ಅಭಿಷೇಕ್‌ ಮನು ಸಿಂಘ್ವಿ  ದೀರ್ಘಾವಧಿಯ ವಿದೇಶಾಂಗ ನೀತಿಯಲ್ಲಿ ರಾಜಿಯಾಗದಂತೆ ಭಾರತ ಮುಕ್ತತೆ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾನಿಲಯದ ದಿ ಫ್ಲೆಚರ್ ಸ್ಕೂಲ್‌ನಲ್ಲಿ "ಭಾರತಕ್ಕೆ 75: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಕಾನೂನು ಮತ್ತು ನ್ಯಾಯದ ಭವಿಷ್ಯ" ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಒ ಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯವು ಅಮೆರಿಕದ  6 ನಗರಗಳ 10 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಡಾ ಅಭಿಷೇಕ್ ಮನು ಸಿಂಘ್ವಿ ಅವರ ಉಪನ್ಯಾಸ ಸರಣಿ ಆಯೋಜಿಸಿತ್ತು.

ಟಫ್ಟ್ಸ್‌ ವಿವಿ ಮಾತ್ರವಲ್ಲದೆ ದಿ ಫ್ಲೆಚರ್ ಸ್ಕೂಲ್, ಹಾರ್ವರ್ಡ್ ಕಾನೂನು ಶಾಲೆ, ಹಾರ್ವರ್ಡ್ ಕೆನಡಿ ಸ್ಕೂಲ್ ಮತ್ತು ಹಾರ್ವರ್ಡ್ ಫ್ಯಾಕಲ್ಟಿ ಕ್ಲಬ್‌ನಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನಡೆದವು.  ʼಸುಪ್ರೀಂ ಕೋರ್ಟ್‌ಗೆ 75: ಹಕ್ಕುಗಳ ರಕ್ಷಣೆ, ಸ್ವಾತಂತ್ರ್ಯ ವಿಸ್ತರಣೆ ಮತ್ತು ಪ್ರಜೆಗಳ ಸಬಲೀಕರಣʼ, ʼಭಾರತದಲ್ಲಿ ಸಲಿಂಗ ವಿವಾಹಗಳ ಸಾಂವಿಧಾನಿಕತೆ ಕುರಿತು ದೇಶದ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪಿನ ಮೂಸೆಯಲ್ಲಿ ಪ್ರಸ್ತುತ ಕಾನೂನಿನ ಚಿತ್ರಣʼ ಎಂಬ ಅವರ ಉಪನ್ಯಾಸಗಳು ಗಮನ ಸೆಳೆದವು.

Also Read
ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ ಸುಪ್ರೀಂ ನಕಾರ; ಅಲ್ಪಮತದ ತೀರ್ಪಿನಲ್ಲಿ ಸಿವಿಲ್‌ ಯೂನಿಯನ್‌ಗೆ ಸಿಜೆಐ ಸಹಮತ

 ಸಿಂಘ್ವಿ ಅವರ ಉಪನ್ಯಾಸದ ಪ್ರಮುಖಾಂಶಗಳು

  • ನಿಷ್ಕ್ರಿಯತೆಯಿಂದ ಸಕಾರಾತ್ಮಕತೆಯೆಡೆಗೆ ಮೂಲಭೂತ ಹಕ್ಕು ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಕನಾಗುವವರೆಗೆ ಭಾರತೀಯ ನ್ಯಾಯಾಲಯ ವಿಕಸನಗೊಂಡಿದೆ.

  • ಭಾರತದ ಬೆಳೆಯುತ್ತಿರುವ ಜನಸಂಖ್ಯೆಯ ಲಾಭಾಂಶ, ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿನ ರೂಪಾಂತರಗಳು ದೇಶದಾದ್ಯಂತ ಕಾನೂನು ಮತ್ತು ನ್ಯಾಯದ ಪ್ರಗತಿಗೆ ಸಹಾಯ ಮಾಡಿವೆ.

  • ನ್ಯಾಯಾಂಗದಲ್ಲಿ ಖಾಲಿ ಹುದ್ದೆಗಳ ಹೆಚ್ಚಳ, ಶಾಸಕಾಂಗ ಹುದ್ದೆಗಳನ್ನು ಅನುಮೋದಿಸುವಾಗ ನ್ಯಾಯಾಂಗದೊಂದಿಗೆ ಸೂಕ್ತ ರೀತಿಯಲ್ಲಿ ಸಮಾಲೋಚಿಸದಿರುವುದು, ದಾವೆಗಳ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದು, ತೀರ್ಪು ನೀಡುವಿಕೆಯಲ್ಲಿ ಉಂಟಾಗುತ್ತಿರುವ ವಿಳಂಬ, ನ್ಯಾಯಾಂಗ ಸಮಗ್ರತೆಯ ಸಮಸ್ಯೆಯಿಂದಾಗಿ ಭಾರತೀಯ ಕಾನೂನು ವ್ಯವಸ್ಥೆಯ ಹಾದಿ ಸುಗಮವಾಗಿಲ್ಲ.

  • ಸ್ವಯಂಚಾಲಿತ ತೀರ್ಪು ಪ್ರಕಟಣೆ, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ ವಿಚಾರಣೆ ಸೇರಿದಂತೆ ಕಾನೂನು ಕ್ಷೇತ್ರದಲ್ಲಿ ತಂತ್ರಜ್ಞಾನದ ಪರಿವರ್ತಕ ಪರಿಣಾಮ ಉಂಟಾಗುತ್ತಿದೆ.

  • ಕಳೆದ 75 ವರ್ಷಗಳಿಂದ, ಭಾರತದ ಸುಪ್ರೀಂ ಕೋರ್ಟ್‌ ನಾಗರಿಕರ ಹಕ್ಕು ಕಾಪಾಡುವ, ಸ್ವಾತಂತ್ರ್ಯ ವಿಸ್ತರಿಸುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದ ಮೂಲತತ್ವವನ್ನು ಕಾಪಾಡುವ ಅಚಲ ಕಾವಲುಗಾರನಾಗಿದೆ.

  • ಸಲಿಂಗ ಜೋಡಿಗೆ ಸಲಿಂಗ ವಿವಾಹದ ಅವಕಾಶ ನಿರಾಕರಿಸುವುದಕ್ಕಾಗಿ ಸಣ್ಣ ತಾಂತ್ರಿಕ ದೋಷ ಅಥವಾ ಭಿನ್ನ ಲಿಂಗೀಯ ವಿವಾಹ ನಿಯಮ ದೊಡ್ಡ ಸಮರ್ಥನೆಯಾಗಬಾರದು. (ಡಾ. ಸಿಂಘ್ವಿ ಸಲಿಂಗ ವಿವಾಹ ಪ್ರಕರಣದಲ್ಲಿ ಅರ್ಜಿದಾರರೊಬ್ಬರನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು).

  • ಲಿಂಗ ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳನ್ನು ಅಪ್ಪಿಕೊಳ್ಳುವ ಗುರಿಯೊಂದಿಗೆ ವಿಶೇಷ ವಿವಾಹ ಕಾಯಿದೆ ರಚಿಸಲಾಗಿದೆ.

  • ಸಲಿಂಗ ಜೋಡಿಗೆ ಮದುವೆಯಾಗುವ ಹಕ್ಕನ್ನು ನಿರಾಕರಿಸುವುದು ಅವರ ಘನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.

  • ಸಿವಿಲ್ ಯೂನಿಯನ್ ಹಕ್ಕು, ದತ್ತು ಸ್ವೀಕಾರ ಮತ್ತು ತೃತೀಯಲಿಂಗಿಗಳಿಗೆ ಮದುವೆಯಾಗುವ ಹಕ್ಕುಗಳು ಮಾನ್ಯತೆ ಪಡೆಯಬೇಕಾದ ಹಕ್ಕುಗಳಾಗಿವೆ.

Kannada Bar & Bench
kannada.barandbench.com