ಸಂವಿಧಾನದ 370ನೇ ವಿಧಿಯ ಕರಡು ರಚನೆಗೆ ಡಾ. ಅಂಬೇಡ್ಕರ್‌ ನಿರಾಕರಿಸಿದ್ದರು: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಸಂವಿಧಾನದ 370ನೇ ವಿಧಿಯ ರದ್ದತಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಮುಖ್ಯವಾಹಿನಿಯೊಂದಿಗೆ ಏಕೀಕರಣಗೊಳಿಸಲು ಅನುವು ಮಾಡಿತು, ಅಭಿವೃದ್ಧಿಗೆ ಕಾರಣವಾಯಿತು ಎಂದು ವ್ಯಾಖ್ಯಾನಿಸಿದ ಉಪರಾಷ್ಟ್ರಪತಿ.
Jagdeep Dhankhar , Vice president of india
Jagdeep Dhankhar , Vice president of india

ಸಂವಿಧಾನದ 370ನೇ ವಿಧಿಯ ರದ್ದತಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಮುಖ್ಯವಾಹಿನಿಯೊಂದಿಗೆ ಏಕೀಕರಣಗೊಳಿಸಲು ಅನುವು ಮಾಡಿದ್ದಲ್ಲದೆ, ರಾಜ್ಯದ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಗೆ ಬಾಗಿಲು ತೆರೆಯಿತು ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶುಕ್ರವಾರ ಹೇಳಿದ್ದಾರೆ.

ಜಮ್ಮು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "370ನೇ ವಿಧಿಯ ರದ್ದತಿಯು ರಾಷ್ಟ್ರದ ಮುಖ್ಯವಾಹಿನಿಯೊಂದಿಗೆ ಈ ವಲಯದ ಏಕೀಕರಣಕ್ಕೆ ಹಾಗೂ ಹೆಚ್ಚಿನ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಗೆ ಕಾರಣವಾಗಿದೆ. ಇದರಿಂದಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿಗೆ ಬರಲು ಸಾಧ್ಯವಾಗಿದೆ. ಇನ್ನು ಕೆಲ ಅವಧಿಯಲ್ಲಿಯೇ ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸಂಪೂರ್ಣವಾಗಿ ಇಲ್ಲಿ ಕಾರ್ಯನಿರ್ವಹಿಸಲಿದೆ," ಎಂದು ಹೇಳಿದರು. ವಿಶೇಷ ಸ್ಥಾನಮಾನದ ರದ್ದತಿಯು ದೇಶದ ಇತರೆ ಭಾಗಗಳೊಂದಿಗೆ ರಾಜ್ಯದ ರೈಲು ಮತ್ತು ವಾಯು ಸಂಪರ್ಕವು ಹೆಚ್ಚಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಂದುವರಿದು, ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್‌ ಅಂಬೇಡ್ಕರ್‌ ಅವರು, 370ನೇ ವಿಧಿಯನ್ನು ರಚಿಸಲು ನಿರಾಕರಿಸಿದ್ದರು ಎಂದು ಅವರು ಈ ವೇಳೆ ಹೇಳಿದರು. "ಭಾರತದ ಸಂವಿಧಾನದ ನಿರ್ಮಾತೃವಾದ ಡಾ. ಅಂಬೇಡ್ಕರ್‌ ಅವರು ಸಂವಿಧಾನದ ಎಲ್ಲ ವಿಧಿಗಳ ಕರಡನ್ನೂ ರಚಿಸಿದರು. ಅದರೆ, 370ನೇ ವಿಧಿಯ ಕರಡನ್ನು ರಚಿಸುವುದಕ್ಕೆ ನಿರಾಕರಿಸಿದರು. ಇಂದು ಈ ವಿಧಿಯು ಇಲ್ಲದೇ ನಾವು ಸಂತಸದಿಂದ ಇದ್ದೇವೆ," ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಿತ್ತು. ಅಲ್ಲದೆ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎನ್ನುವ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿತು.

ಭಾಷಣದ ವೇಳೆ ಧನಕರ್‌ ಅವರು ಸಂವಿಧಾನದ 370ನೇ ವಿಧಿಯು ತಪ್ಪು ನಡೆಯಾಗಿದ್ದು, ಅದು ಕೇವಲ ತಾತ್ಕಾಲಿಕ ಕ್ರಮವಾಗಿತ್ತು. ವೈಯಕ್ತಿಕವಾಗಿ ತಾನು ಇದರ ರದ್ದತಿಗಾಗಿ ಎರಡು ದಶಕಗಳ ಕಾಲ ಶ್ರಮಿಸಿದ್ದಾಗಿ ತಿಳಿಸಿದರು. ಸಂವಿಧಾನದ 35ಎ ಮತ್ತು 370ನೇ ವಿಧಿಗಳನ್ನು ಕೇವಲ ತಾತ್ಕಾಲಿಕ ಕ್ರಮವಾಗಿ ಮಾತ್ರವೇ 20 ವರ್ಷಗಳ ಅವಧಿಗೆ ಪರಿಚಯಿಸಲಾಗಿತ್ತು ಎಂದು ಅವರು ಬೆರಳು ಮಾಡಿದರು.

ಸಂವಿಧಾನದ 370ನೇ ವಿಧಿಯನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, "ಒಂದು ದೇಶದಲ್ಲಿ ಎರಡು ವಿಧಾನ, ಎರಡು ತತ್ವ ಹಾಗೂ ಎರಡು ಲಾಂಛನಗಳು ಇರಲು ಸಾಧ್ಯವಿಲ್ಲ," ಎಂದಿದ್ದ ಡಾ. ಶ್ಯಾಮ ಪ್ರಸಾದ್‌ ಮೂಖರ್ಜಿ ಅವರ ಮಾತುಗಳನ್ನು ನೆನೆದರು. ಪ್ರಸ್ತುತ ಮೂಖರ್ಜಿ ಅವರ ಘೋಷವಾಕ್ಯವು ನನಸಾಗಿದೆ ಎಂದು ಹರ್ಷಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಹಾಗೂ ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕು, ಸವಲತ್ತುಗಳನ್ನು ನೀಡಿದ್ದ 35ಎ ಪರಿಚ್ಛೇದದ ರದ್ದತಿಯ ನಂತರ ಕಾಶ್ಮೀರದಲ್ಲಿ ಆಗಿರುವ ಅಭಿವೃದ್ಧಿಯು ಡಾ. ಶ್ಯಾಮಾ ಪ್ರಸಾದ್‌ ಮೂಖರ್ಜಿ ಅವರ ದೂರದರ್ಶಿತ್ವಕ್ಕೆ ಹಿಡಿದ ಕನ್ನಡಿ ಎಂದು ವ್ಯಾಖ್ಯಾನಿಸಿದರು.

Related Stories

No stories found.
Kannada Bar & Bench
kannada.barandbench.com