Medical Doctor
Medical Doctor

ವೈದ್ಯೆ ಕೃತಿಕಾಗೆ ಅನಸ್ತೇಶಿಯಾ ನೀಡಿ ಕೊಲೆ: ಪತಿ ಡಾ. ಮಹೇಂದ್ರ ರೆಡ್ಡಿಗೆ ಜಾಮೀನು ನಿರಾಕರಿಸಿದ ಬೆಂಗಳೂರು ನ್ಯಾಯಾಲಯ

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಅನಸ್ತೇಶಿಯಾದ ಪ್ರಮಾಣ ಹೆಚ್ಚಾದ ಕಾರಣ ಕೃತಿಕಾ ಸಾವು ಸಂಭವಿಸಿದೆ ಎಂಬುದು ತಿಳಿದು ಬಂದಿತ್ತು.
Published on

ಪತ್ನಿ ಡಾ.ಕೃತಿಕಾ ರೆಡ್ಡಿಗೆ ಅನಸ್ತೇಶಿಯಾ ನೀಡಿ ಕೊಂದ ಆರೋಪ ಎದುರಿಸುತ್ತಿರುವ ಪತಿ ಡಾ. ಜಿ ಎಸ್‌ ಮಹೇಂದ್ರ ರೆಡ್ಡಿಗೆ ಜಾಮೀನು ನೀಡಲು ಬೆಂಗಳೂರಿನ ಸತ್ರ ನ್ಯಾಯಾಲಯ ನಿರಾಕರಿಸಿದೆ.

ಜಿ ಎಸ್ ಮಹೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಮೇಯೋಹಾಲ್‌ನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಓಂಕಾರಪ್ಪ ಗುರುವಾರ ವಿಚಾರಣೆ ನಡೆಸಿದರು.

ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಆರೋಪಿ ಒಬ್ಬ ವೃತ್ತಿನಿರತ ವೈದ್ಯರು. ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಿರುವ ಅವರಿಗೆ ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ ತನಿಖೆಯ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು” ಎಂದು ಮನವಿ ಮಾಡಿದರು. ಈ ವಾದ ಮನ್ನಿಸಿದ ನ್ಯಾಯಾಧೀಶರು ಜಾಮೀನು ಕೋರಿಕೆ ಅರ್ಜಿ ತಿರಸ್ಕರಿಸಿದರು.

ಪ್ರಕರಣದ ಹಿನ್ನೆಲೆ: ಡಾ.ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು. ಪತಿ ಮಹೇಂದ್ರ ರೆಡ್ಡಿ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ. ‍ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಹಿರಿಯರ ಸಮ್ಮುಖದಲ್ಲಿ 2024ರ ಮೇ 24ರಂದು ಮದುವೆಯಾಗಿದ್ದರು. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ನೆಪವೊಡ್ಡಿ ಮಹೇಂದ್ರ ರೆಡ್ಡಿ ಬೇರೆ ಔಷಧಿಗಳನ್ನು ನೀಡುವ ಸಮಯದಲ್ಲಿ 2024ರ ಏಪ‍್ರಿಲ್ 23ರಂದು ಕೃತಿಕಾಗೆ ಹೆಚ್ಚುವರಿ ಅನಸ್ತೇಶಿಯಾ ನೀಡಿದ್ದರು. 

ಮೃತರ ಪೋಷಕರು ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ನೀಡಿದ್ದ ವಿವರಣೆ ಅನುಸಾರ ಯುಡಿಆರ್‌ (ಅಸ್ವಾಭಾವಿಕ ಸಾವು) ದಾಖಲಾಗಿತ್ತು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಬಂದ ನಂತರ ಅನಸ್ತೇಶಿಯಾದ ಪ್ರಮಾಣ ಹೆಚ್ಚಾದ ಕಾರಣ ಸಾವು ಸಂಭವಿಸಿದೆ ಎಂಬುದು ತಿಳಿದು ಬಂದಿತ್ತು.

ಈ ಸಂಬಂಧ ಕೃತಿಕಾ ತಂದೆ ಕೆ ಮುನಿರೆಡ್ಡಿ ನೀಡಿದ ದೂರಿನ ಅನುಸಾರ ಪೊಲೀಸರು ವರ್ತೂರಿನ ಗುಂಜೂರು ನಿವಾಸಿ ಡಾ.ಮಹೇಂದ್ರ ರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮಹೇಂದ್ರ ರೆಡ್ಡಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com