
ಮಧುಮೇಹದ ಮಹತ್ವದ ಔಷಧಿಯ ಪೇಟೆಂಟ್ ಕುರಿತು ನೊವೊ ನಾರ್ಡಿಸ್ಕ್ ಕಂಪೆನಿ ಸಲ್ಲಿಸಿದ್ದ ಪೇಟೆಂಟ್ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ತಾನು ಭಾರತದಲ್ಲಿ ಒಜೆಂಪಿಕ್ ರೀತಿಯ ಔಷಧ ಮಾರಾಟ ಮಾಡುವುದಿಲ್ಲ ಎಂದು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ದೆಹಲಿ ಹೈಕೋರ್ಟ್‌ಗೆ ಮೇ 29ರಂದು ಮುಚ್ಚಳಿಕೆ ಬರೆದುಕೊಟ್ಟಿದೆ.
ಡಾ. ರೆಡ್ಡೀಸ್ ಔಷಧವನ್ನು ಭಾರತದಲ್ಲಿ ಮಾರಾಟ ಮಾಡುವ ಪರವಾನಗಿ ಹೊಂದಿಲ್ಲ. ಅದು ಭಾರತದಲ್ಲಿ ಆ ರೀತಿಯ ಔಷಧ ಮಾರುವುದಿಲ್ಲ. ಆದರೆ ಅರ್ಜಿದಾರ ನೊವೊ ನಾರ್ಡಿಸ್ಕ್ ಇನ್ನೂ ಪೇಟೆಂಟ್ ಪಡೆಯದೆ ಇರುವ ದೇಶಗಳಲ್ಲಿ ರೆಡ್ಡೀಸ್‌ಗೆ ರಫ್ತು ಮಾಡುವ ಹಕ್ಕು ಇದೆ ಎಂದು ಡಾ. ರೆಡ್ಡೀಸ್ ಪರ ಹಾಜರಾದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟ್ಗಿ ಮತ್ತವರ ತಂಡ ವಾದ ಮಂಡಿಸಿತು.
ವಾದ ದಾಖಲಿಸಿಕೊಂಡ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ಡಾ ರೆಡ್ಡೀಸ್ ಮುಂದಿನ ವಿಚಾರಣೆ ನಡೆಯಲಿರುವ ಆಗಸ್ಟ್ 19ರವರೆಗೆ ಇದಕ್ಕೆ ಬದ್ಧವಾಗಿರಬೇಕು ಎಂದು ನಿರ್ದೇಶನ ನೀಡಿದರು.
ನೊವೊ ನಾರ್ಡಿಸ್ಕ್ ಪರವಾಗಿ ಹಾಜರಾದ ಹಿರಿಯ ವಕೀಲ ಸಂದೀಪ್ ಸೇಥಿ, ಔಷಧದ ಪ್ರಸ್ತಾವಿತ ರಫ್ತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಪೇಟೆಂಟ್ ಕಾಯಿದೆ- 1970ರ ಪ್ರಕಾರ, ಪೇಟೆಂಟ್ ಕಾನೂನು ಉಲ್ಲಂಘಿಸಿದ ಉತ್ಪನ್ನದ ರಫ್ತು ಕೂಡ ಕಾಯಿದೆಯನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು. ಇದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಮುಂದಿನ ವಿಚಾರಣೆಯ ದಿನ ಈ ಅಂಶ ಕುರಿತು ಆಲಿಸಲಾಗುವುದು ಎಂದಿತು.
ಡಾ. ರೆಡ್ಡೀ'ಸ್ ಮತ್ತು ಅದರ ಅಂಗಸಂಸ್ಥೆ ಅನುಮತಿಯಿಲ್ಲದೆ ಸೆಮಾಗ್ಲುಟೈಡ್ ಫಾರ್ಮುಲೇಷನ್‌ಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಮೂಲಕ ತನ್ನ ಪೇಟೆಂಟ್ ಉಲ್ಲಂಘಿಸಿದೆ ಎಂದು ನೊವೊ ನಾರ್ಡಿಸ್ಕ್ ಆರೋಪಿಸಿತ್ತು. ಸೆಮಾಗ್ಲುಟೈಡ್ ರಾಸಾಯನಿಕ ಅಂಶವು ಓಜೆಂಪಿಕ್, ವೆಗೋವಿ ಮತ್ತು ರೈಬೆಲ್ಸಸ್‌ನಲ್ಲಿ ಪ್ರಮುಖ ಅಂಶವಾಗಿದ್ದು, ಟೈಪ್ 2 ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ಮಾರಾಟವಾಗುತ್ತದೆ.