ಇ ಡಿಗೆ ನೀಡಿರುವ ಅತಿಯಾದ ಅಧಿಕಾರಕ್ಕೆ ಸುಪ್ರೀಂ ಕಡಿವಾಣ ಹಾಕದಿದ್ದರೆ ಯಾರೂ ಸುರಕ್ಷಿತ ಉಳಿಯರು: ಹಿರಿಯ ವಕೀಲ ಸಾಳ್ವೆ

"ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದರೂ ಅವರನ್ನು ಬಂಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಿರುವಾಗ ಇ ಡಿ ಅಧಿಕಾರವನ್ನು ನ್ಯಾಯಾಲಯ ಖಂಡಿತಾ ನಿಯಂತ್ರಿಸಬಹುದು” ಎಂದರು ಸಾಳ್ವೆ.
Senior Advocate Harish Salve
Senior Advocate Harish Salve

ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ವಿಪರೀತ ಅಧಿಕಾರ ನೀಡಲಾಗಿದ್ದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ರಿಯಾಲ್ಟಿ ಸಮೂಹದ ಎಂ3ಎಂ ನಿರ್ದೇಶಕರ ಪರವಾಗಿ ಅವರು ಇ ಡಿ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಿದ್ದರು.

ಮಾಜಿ ನ್ಯಾಯಾಧೀಶರರೊಬ್ಬರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಎಂ3ಎಂ ಕಂಪೆನಿಯ ನಿರ್ದೇಶಕರಾದ ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಅವರ ಬಂಧನ ಕುರಿತಂತೆ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠಕ್ಕೆ ಈ ವಿಚಾರವನ್ನು ವಿವರಿಸಿದರು.   

ಬನ್ಸಾಲ್‌ ಸಹೋದರರನ್ನು ಸಾಳ್ವೆ ಹಾಗೂ ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

“ಇ ಡಿಗೆ ನೀಡಿರುವ ಅತಿಯಾದ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಕಡಿವಾಣ ಹಾಕದಿದ್ದರೆ ಯಾರೂ ಸುರಕ್ಷಿತವಾಗಿ ಉಳಿಯುವುದಿಲ್ಲ. ಬಂಧನ ಹೇಗಾಗಿದೆ ಎಂಬುದನ್ನು ನ್ಯಾಯಾಲಯ ನೋಡಬೇಕು. ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದರೂ ಅವರನ್ನು ಬಂಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಿರುವಾಗ ಇ ಡಿ ಅಧಿಕಾರವನ್ನು ನ್ಯಾಯಾಲಯ ಖಂಡಿತಾ ನಿಯಂತ್ರಿಸಬಹುದು” ಎಂದು ಸಾಳ್ವೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

“ಇಂತಹ ಅಧಿಕಾರಕ್ಕೆ ಲಗಾಮು ಹಾಕಬೇಕಿದೆ. 14 ದಿನಗಳಿಂದ ಆರೋಪಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ. ಇ ಡಿ ಈ ರೀತಿ ವರ್ತಿಸುವಂತೆ ಪ್ರೇರೇಪಿಸಲು ಆರೋಪಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ಷರತ್ತು ಉಲ್ಲಂಘನೆಯಾಗಿರುವ ಸಣ್ಣ ಸುಳಿವೂ ಇಲ್ಲ” ಎಂದರು.

 ಆಗ ನ್ಯಾ. ಸುಂದರೇಶ್‌ ಅವರು ಲಘು ಧಾಟಿಯಲ್ಲಿ “ನೀವು ಹೇಳಿದ್ದು ಸರಿ. ಇದು ಇಲಿ- ಬೆಕ್ಕಿನ ಆಟವಾಗಿದೆ. ಅವರು (ಇ ಡಿ) ಕಾನೂನು ಬಳಸಿಕೊಳ್ಳುತ್ತಿದ್ದಾರೆ” ಎಂದರು.

ಸಿಬಿಐ/ಇ ಡಿ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸುಧೀರ್ ಪಾರ್‌ಮಾರ್‌ ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹರಿಯಾಣ ಭ್ರಷ್ಟಾಚಾರ ನಿಗ್ರಹ ದಳ ಬನ್ಸಾಲ್‌ ಸಹೋದರರನ್ನು ಬಂಧಿಸಿತ್ತು. ನಂತರ, ಹರಿಯಾಣದ ಪಂಚಕುಲದ ವಿಶೇಷ ನ್ಯಾಯಾಲಯ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿತ್ತು. ಈ ಆದೇಶವನ್ನು ಬನ್ಸಾಲ್‌ ಸಹೋದರರು ಪ್ರಶ್ನಿಸಿದ್ದರು. ತಮ್ಮನ್ನು ವಶಕ್ಕೆ ಪಡೆದಿರುವುದು ಅಕ್ರಮ ಬಂಧನಕ್ಕೆ ಸಮ. ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ತಪ್ಪಿಸುವ ಸಲುವಾಗಿ ತಮ್ಮನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಹೋದರರು ದೂರಿದ್ದರು. ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರು ಕಳೆದ ತಿಂಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ರಿಯಲ್ ಎಸ್ಟೇಟ್ ಸಂಸ್ಥೆಯಾದ ಐಆರ್‌ಇಒಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳ ಪರ ಪಾರ್‌ಮಾರ್‌ ಒಲವು ತೋರಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿರುವುದಾಗಿ ಇ ಡಿ ಹೇಳಿಕೊಂಡಿತ್ತು. ಎಸಿಬಿ ಪ್ರಕರಣ ದಾಖಲಿಸಿದ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಾರ್‌ಮಾರ್ ಅವರನ್ನು ಅಮಾನತುಗೊಳಿಸಿತ್ತು.

ಬನ್ಸಾಲ್ ಸಹೋದರರು ಈಗ ನಿರೀಕ್ಷಣಾ ಜಾಮೀನಿಗಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು  ಎಂದು ಇಂದು ತನ್ನ ಆದೇಶದಲ್ಲಿ ತಿಳಿಸಿದ ಸುಪ್ರೀಂ ಕೋರ್ಟ್ ಅವರ ಅರ್ಜಿಗಳನ್ನು ವಿಲೇವಾರಿ ಮಾಡಿತು.

ಇ ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಬೇರೊಂದು ಪ್ರಕರಣದಲ್ಲಿ ಸಹೋದರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿರುವ ಆದೇಶವನ್ನು ನಾಳೆ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪೀಠಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಇ ಡಿ ಅರ್ಜಿಗಳ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

Kannada Bar & Bench
kannada.barandbench.com