ಟ್ರ್ಯಾಕ್ಟರ್‌ಗೆ ಟ್ರೇಲರ್ ಜೋಡಿಸಿದ ಮಾತ್ರಕ್ಕೆ ಚಾಲಕನ ಚಾಲನಾ ಪರವಾನಗಿ ಅಮಾನ್ಯವಾಗದು: ಬಾಂಬೆ ಹೈಕೋರ್ಟ್

ವಿಮಾ ಕಂಪನಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುವಾಗ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ವಿಧವೆ ಮತ್ತು ಅಪ್ರಾಪ್ತ ಮಕ್ಕಳಿಗೆ ಪರಿಹಾರ ಪಾವತಿಸುವಂತೆ ತಾಕೀತು ಮಾಡಿತು.
Tractor
TractorImage for representative purpose
Published on

ತನ್ನ ಟ್ರ್ಯಾಕ್ಟರ್‌ಗೆ ಟ್ರೇಲರ್ ಜೋಡಿಸಿದ ಮಾತ್ರಕ್ಕೆ ಚಾಲಕನ ಶಾಶ್ವತ ಚಾಲನಾ ಪರವಾನಗಿಯನ್ನು ವಿಮೆ ಪರಿಹಾರ ಪಡೆಯಲು ಅಮಾನ್ಯವೆಂದು ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಚಾಬು ಅಲಿಯಾಸ್‌ ಚಾಯತೈ ವಸಂತ ಕೋಡ್ಪೆ ಮತ್ತು ಬಾಲಾಜಿ ವಾಸುದೇವ್‌ ಸೋಮನ್‌ಕರ್‌ ನಡುವಣ ಪ್ರಕರಣ].

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10ರ ಅಡಿಯಲ್ಲಿ ನಿರ್ದಿಷ್ಟ ವರ್ಗಗಳ ಮೋಟಾರು ವಾಹನಗಳನ್ನು ಓಡಿಸಲು ಪರವಾನಗಿಯನ್ನು ನೀಡಲಾಗುತ್ತದೆ, ನಿರ್ದಿಷ್ಟ ವರ್ಗದ ವಾಹನವನ್ನು ಚಲಾಯಿಸಲು ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರುವ ವ್ಯಕ್ತಿ ಆ ವಾಹನಕ್ಕೆ ಟ್ರೇಲರ್ ಸೇರಿಸಿರುವುದರಿಂದ ವಾಹನ ಓಡಿಸಲು ನಿರ್ಬಂಧಿತನಾಗುವುದಿಲ್ಲ ಎಂದು ನಾಗಪುರ ಪೀಠದ ಏಕಸದಸ್ಯ ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಅವರು ತಿಳಿಸಿದ್ದಾರೆ.

ಟ್ರಾಕ್ಟರ್‌ಗೆ ಟ್ರೇಲರ್ ಜೋಡಿಸುವುದರಿಂದ ಅದು ಸಾರಿಗೆ ವಾಹನ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
ಚಾಲಕ ಪಾನಮತ್ತನಾಗಿ ಕಾರು ಓಡಿಸಿದ್ದರೂ ವಿಮಾ ಕಂಪನಿ ಮೊದಲಿಗೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು: ಕೇರಳ ಹೈಕೋರ್ಟ್

"ಟ್ರಾಕ್ಟರ್ ಅಥವಾ ಮೋಟಾರು ವಾಹನವು ಟ್ರಾಕ್ಟರ್ ಅಥವಾ ಮೋಟಾರು ವಾಹನವಾಗಿಯೇ ಉಳಿಯುತ್ತದೆ. ಒಬ್ಬ ವ್ಯಕ್ತಿ ಟ್ರಾಕ್ಟರ್ ಅಥವಾ ಮೋಟಾರು ವಾಹನವನ್ನು ಓಡಿಸಲು ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿದ್ದರೆ, ಅವನು ಟ್ರೇಲರ್ ಜೋಡಿಸಿ ಅದರಲ್ಲಿ ಕೆಲ ಸರಕುಗಳನ್ನು ಸಾಗಿಸಿದರೂ ಕೂಡ ಆ ಟ್ರಾಕ್ಟರ್ ಅಥವಾ ಮೋಟಾರು ವಾಹನವನ್ನು ಓಡಿಸಲು ಮಾನ್ಯವಾದ ಪರವಾನಗಿಯನ್ನು ಹೊಂದಿರುತ್ತಾನೆ”ಎಂದು ಪೀಠ ತಿಳಿಸಿತು.

ಹೀಗಾಗಿ ಅಪಘಾತದ ದಿನ, ಮೇಲ್ಮನವಿದಾರರ ಪತಿ ಕುಳಿತಿದ್ದ ಟ್ರ್ಯಾಕ್ಟರ್‌  ಚಾಲಕ, ಟ್ರ್ಯಾಕ್ಟರ್‌ಗೆ ಟ್ರೇಲರ್ ಜೋಡಿಸಿದ್ದರಿಂದ ಮಾನ್ಯ ಚಾಲನಾ ಪರವಾನಗಿ ಹೊಂದಿಲ್ಲ ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಟ್ರಾಕ್ಟರ್‌ಗೆ ಟ್ರೇಲರ್‌ ಜೋಡಿಸಿ ಸರಕು ಸಾಗಿಸಲು ಬಳಸಿದ್ದರಿಂದ ಟ್ರಾಕ್ಟರ್‌ ಓಡಿಸುವ ಪರವಾನಗಿ ನಿಷ್ಪರಿಣಾಮಕಾರಿ ಆಗುವುದಿಲ್ಲ. ಇಲ್ಲದಿದ್ದರೆ ಲಘು ಮೋಟಾರು ವಾಹನ ಚಲಾಯಿಸಲು ಪರವಾನಗಿ ಪಡೆದಿರುವ ಖಾಸಗಿ ಕಾರಿನ ಮಾಲೀಕ ಆತನ ಕಾರಿಗೆ ಮೇಲ್ಛಾವಣಿ ಕ್ಯಾರಿಯರ್‌ ಅಥವಾ ಹಿಂಬದಿಗೆ ಟ್ರೇಲರ್‌ ಹಾಕಿ ಸರಕು ಸಾಗಿಸಿದರೆ ಆಗ ಲಘು ಮೋಟಾರ್‌ ವಾಹನ ಕೂಡ ಪ್ರತಿ ಬಾರಿ ʼಸಾರಿಗೆ ವಾಹನ ಆಗಿಬಿಡುತ್ತದೆ. ಹಾಗೂ ಆ ವಾಹನ ಚಲಾಯಿಸಲು ಮಾಲೀಕನಿಗೆ ಯಾವುದೇ ಪರವಾನಗಿ ಇಲ್ಲ ಎಂದು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ಪೀಠ ಸುಪ್ರೀಂ ಕೋರ್ಟ್‌ನ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿ ವಿವರಿಸಿತು.

Kannada Bar & Bench
kannada.barandbench.com