ಕಡಿಮೆ ವೇಗದಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರೂ ಅದು ಐಪಿಸಿ ಸೆಕ್ಷನ್ 279ರ ಅಡಿ 'ಅಡ್ಡಾದಿಡ್ಡಿ ಮತ್ತು ನಿರ್ಲಕ್ಷ್ಯದ ಚಾಲನೆ' ಎನಿಸಿಕೊಳ್ಳಲಿದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ಶಬರಿಮಲೆಯ ಚಾರಣ ಮಾರ್ಗದಲ್ಲಿ ಸರಕು ಸಾಗಾಟ ಟ್ರಾಕ್ಟರ್ಗಳನ್ನು ಅಡ್ಡಾದಿಡ್ಡಿ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿರುವುದರಿಂದ ಯಾತ್ರಿಕರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಭಕ್ತರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದರು. ಈ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ರವಿ ಕಪೂರ್ ಮತ್ತು ರಾಜಸ್ತಾನ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಾಲಯ ವ್ಯಕ್ತಿಯೊಬ್ಬ ನಿಧಾನವಾಗಿ ಆದರೆ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದರೆ ಅದು ಐಪಿಸಿ ಸೆಕ್ಷನ್ 279ರ ಪ್ರಕಾರ ಅಡ್ಡಾದಿಡ್ಡಿ ಮತ್ತು ನಿರ್ಲಕ್ಷ್ಯದ ಚಾಲನೆ ಎನಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಕೂಡ ಟ್ರಾಕ್ಟರ್‌ಗಳನ್ನು ಚಲಾಯಿಸುವಾಗ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಬರಿಮಲೆಯ ಡಿವೈಎಸ್‌ಪಿ ಮತ್ತು ಠಾಣಾಧಿಕಾರಿಗೆ (ಸನ್ನಿಧಾನಂ ಮತ್ತು ಪಂಪಾ) ನಿರ್ದೇಶನ ನೀಡಿತು. ತುರ್ತು ಸಂದರ್ಭದಲ್ಲಿ ಪಂಪಾದಿಂದ ಸನ್ನಿಧಾನದವರೆಗೆ ಸರಕು ಸಾಗಾಟಕ್ಕೆ ಟ್ರಾಕ್ಟರ್‌ಗಳಿಗೆ ಅನುಮತಿ ನೀಡಿ 2016 ಮತ್ತು 2017 ರಲ್ಲಿ ನ್ಯಾಯಾಲಯ ಆದೇಶಿಸಿತ್ತು.